ಮಂಗಳೂರು:ವಿದ್ಯುತ್ ವಿತರಣೆಗೆ ನೆರವಾಗುವ ನಿಟ್ಟಿನಲ್ಲಿ ಉರ್ವಾದಲ್ಲಿ ಸಬ್ ಸ್ಟೇಶನ್ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಅವರು ಶುಕ್ರವಾರ ಮೆಸ್ಕಾಂ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಎ.ಬಿ.ಶೆಟ್ಟಿ ಸರ್ಕಲ್ ನಿಂದ ಕರಾವಳಿ ವೃತ್ತದ ವರೆಗೆ ಭೂಗತಕೇಬಲ್ ಅಳವಡಿಸಲಾಗುವುದು ಮತ್ತು ಸ್ವಿಚ್ ಆನ್ ಮತ್ತು ಸ್ವೀಚ್ ಆಫ್ ಅಳಡಿಸಲಾಗುವುದು ಎಂದು ತಿಳಿಸಿದ ಶಾಸಕ ಲೋಬೊ ರಸ್ತೆ ಪಕ್ಕದಲ್ಲಿ ನಿರುಪಯುಕ್ತವಾದ ಕಂಬಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಸೂಚಿಸಿದರು.

ಬೆಂಗರೆ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಿದ್ದು ತ್ವರಿತವಾಗಿ ಪರಿಹಾರ ನೀಡಬೇಕು ಎಂದು ತಿಳಿಸಿದ ಅವರು ಈಗಾಗಲೇ ಸಾಕಷ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ, ಆದರೂ ಇನ್ನೂ ಸಮಸ್ಯೆ ಇರುವುದಾಗಿ ಹೇಳಿದ ಅವರು ಆದಷ್ಟರಮಟ್ಟಿಗೆ ಜನರು ಪದೇ ಪದೇ ಸಮಸ್ಯೆ ಪರಿಹರಿಸುವಂತೆ ಬೇಡಿಕೆ ಸಲ್ಲಿಸುವುದನ್ನು ತಪ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಮರಗಳನ್ನು ಕಡಿದು ಸಾಗಿಸಲು ನಗರಪಾಲಿಕೆ ಲಾರಿಯನ್ನು ಕಾಯುವುದನ್ನು ತಪ್ಪಿಸಬೇಕು. ಇಲಾಖೆಯಲ್ಲಿ ಇರುವ ಲಾರಿಯನ್ನು ಮುಂಗಡವಾಗಿ ಗೊತ್ತುಪಡಿಸಿ ಕಾಮಗಾರಿಯಾಗುವ ಕಾಲದಲ್ಲಿ ಮರಸಾಗಿಸಲು ಬಳಕೆ ಮಾಡಬೇಕು ಎಂದು ಸೂಚಿಸಿದ ಲೋಬೊ ಅವರ ಹೇಳಿಕೆಯನ್ನು ಸ್ವೀಕರಿಸಿದ ಅಧಿಕಾರಿಗಳು ತಾವು ನಿರಂತರವಾಗಿ ಪಾಲನೆ ಮಾಡುವುದಾಗಿ ಭರವಸೆ ನೀಡಿದರು.

ಜೆಪ್ಪಿನಮೊಗರು, ಬಜಾಲ್, ಬಿಕರ್ನಕಟ್ಟೆ, ಬಜ್ಜೋಡಿ ಪರಿಸರದ ಬಗ್ಗೆಯೂ ಚರ್ಚಿಸಿದರು.

ಭವಂತಿ ಸ್ಟೀಟ್ ನಿಂದ ರೂಪವಾಣಿವರೆಗೆ ವಿದ್ಯುತ್ ಕಂಬದ ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕ ಲೋಬೊ ಕೊಟ್ಟಸೂಚನೆಯನ್ನು ಅಧಿಕಾರಿಗಳು ತ್ವರಿತವಾಗಿ ಮಾಡುವ ಭರವಸೆ ನೀಡಿದರು.

ಸಭೆಯಲ್ಲಿ ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಮಂಜಪ್ಪ ಹಾಗೂ ದೀಪಕ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು ಭಾಗವಹಿಸಿದ್ದರು.