ಮಂಗಳೂರು: ಮಂಗಳೂರು ಎಡಿಬಿ ಎರಡನೇ ಹಂತದ ಕಾಮಗಾರಿಯಲ್ಲಿ ಯುಜಿಡಿ ಮತ್ತು ನೀರು ಸರಬರಾಜು ಕೊಳವೆ ಅಳವಡಿಸುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ಎಡಿಬಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿದರು.

ಪಳ್ನೀರ್, ಹಂಪನಕಟ್ಟೆ ಕ್ಲಾಕ್ ಟವರ್, ವೆಲೆನ್ಸಿಯ, ಜೆಪ್ಪು, ಬೋಳಾರ, ಕುದ್ರೋಳಿ ಸಹಿತ ಲೋಬೊ ಸ್ಥಳ ಪರಿಶೀಲನೆ ಮಾಡಿದರು. ಅಧಿಕಾರಿಗಳು ತಮಗೆ ಸಮಸ್ಯೆ ಉಂಟಾಗುವ ಸ್ಥಳಗಳನ್ನು ತೋರಿಸಿ ಯಾವುದೇ ವಿವಾದ ಉಂಟಾಗದ ರೀತಿಯಲ್ಲಿ ಕೊಳವೆ ಅಳವಡಿಸುವ ಬಗ್ಗೆ ಚರ್ಚಿಸಿದರು.

ಶಾಸಕ ಜೆ.ಆರ್.ಲೋಬೊ ಅವರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಸಲಹೆ ನೀಡಿದರು. ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಪೈಪ್ ಲೈನ್ ಅಳವಡಿಸದಂತೆ ಸೂಚಿಸಿದರು.

ಅಧಿಕಾರಿಗಳು ತಮಗೆ ಸಮಸ್ಯೆತರುವ ಸ್ಥಳಗಳನ್ನು ತೋರಿಸಿ ಆಧುನಿಕ ರೀತಿಯಲ್ಲಿ ಯಾವುದೇ ವಿವಾದ ಬರದ ರೀತಿಯಲ್ಲಿ ಪೈಪ್ ಲೈನ್ ಅಳವಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ತಿಳಿಸಿದ ಅವರು ಅಡ್ಡಿ ಇರದ ಸ್ಥಳಗಳಲ್ಲಿ, ಫುಟ್ ಪಾತ್ ಗಳಲ್ಲಿ ಪೈಪ್ ಲೈನ್ ಹೋಗುವಂತೆ ನೋಡಿಕೊಳ್ಳಬೇಕೆಂದರು.

ಈಗಾಗಲೇ ಸ್ಥಳ ಬಿಟ್ಟುಕೊಟ್ಟಿರುವುದನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚುವರಿ ಸ್ಥಳದ ಅವಶ್ಯಕತೆ ಇದ್ದರೆ ಮುಂಚಿತವಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ವಿವಾದ ಉಂಟಾಗದಂತೆ ನೋಡಿಕೊಳ್ಳುವಂತೆಯೂ ಸಲಹೆ ನೀಡಿದರು.

ಶಾಸಕರ ಜೊತೆಯಲ್ಲಿ ಮಹಾನಗರಪಾಲಿಕೆ ಕಮಿಷನರ್ ಮಹಮದ್ ನಜೀರ್, ಎಡಿಬಿ ಮುಖ್ಯಸ್ಥ ಪ್ರಭಾಕರ್ ಶರ್ಮಾ ಸಹಿತ ಅಧಿಕಾರಿಗಳಿದ್ದರು.