ಮಂಗಳೂರು: ಕಂಕನಾಡಿ ರೈಲ್ವೇ ಸ್ಟೇಷನ್ ರಸ್ತೆಯನ್ನು ಅಗಲೀಕರಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ 2 ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ಕಂಕನಾಡಿ ರೈಲ್ವೇ ಸ್ಟೇಷನ್ ರಸ್ತೆ ಅಗಲೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಪಂಪ್ ವೆಲ್ ಪಡೀಲ್ ರಸ್ತೆ ಕಂಕನಾಡಿ ರೈಲ್ವೇ ಸ್ಟೇಷನ್ ಗೆ ಹೋಗುವ ಪ್ರಮುಖ ರಸ್ತೆಯಾಗಿದ್ದು ಇದು ಕಿರಿದಾಗಿದ್ದು ಸಮಸ್ಯೆಯಾಗುತ್ತಿತ್ತು.
ಇದನ್ನು ಮನಗಂಡು ತಾವು ಮುತುವರ್ಜಿ ವಹಿಸಿ ಸರ್ಕಾರದ ಜೊತೆ ಮಾತುಕತೆ ನಡೆಸಿ ನೂತನ ರಸ್ತೆಗೆ ಹಣಮಂಜೂರು ಮಾಡಿಸಿದ್ದಾಗಿ ನುಡಿದರು.
ಕಂಕನಾಡಿ ರೈಲ್ವೇ ಸ್ಟೇಶನ್ ರಸ್ತೆಯನ್ನು ಆಧುನೀಕರಣ ಮಾಡಬೇಕೆಂಬುದು ನನ್ನ ಕನಸು ಎಂದ ಅವರು ಈ ರಸ್ತೆಯನ್ನು ಅಗಲೀಕರಣ ಮಾಡಿದರೆ ವಾಹನ ಸಂಚಾರ ಸುಗಮವಾಗಲಿದೆ ಎಂದ ಅವರು ಜನರು ಸಹಕಾರ ನೀಡಬೇಕು. ಜನರ ಸಹಕಾರವಿದ್ದರೆ ಯಾವುದನ್ನೂ ಸಾಧಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ ಅವರನ್ನು ರಿಕ್ಷಾ ಚಾಲಕರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಡೆನ್ನೀಸ್ ಡಿಸಿಲ್ವಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.