ಮಂಗಳೂರು: ಜನಸಂಪರ್ಕ ಸಭೆಯಲ್ಲಿ ನಾಗರಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿಗೂ ಸ್ಪಂದಿಸುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಬಜ್ಜೋಡಿ ಇನ್ ಫೆಂಟ್ ಜೀಸಸ್ ಚರ್ಚ್ ಹಾಲ್ ನಲ್ಲಿ ಮರೋಳಿ ವಾರ್ಡ್ ನ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನೀವು ಕೊಟ್ಟಿರುವ ಅರ್ಜಿಗಳಲ್ಲಿ ಯಾವುದನ್ನೆಲ್ಲಾ ತಕ್ಷಣಕ್ಕೆ ಪರಿಹರಿಸಬಹುದು ಅವುಗಳನ್ನು ಪರಿಹರಿಸುವುದು ಮತ್ತು ಎಲ್ಲಿಗೆ ಹಣದ ಅವಶ್ಯಕತೆಯಿದೆ ಅಲ್ಲಿಗೆ ಹೇಗಾದರೂ ಅನುದಾನವನ್ನು ಒದಗಿಸಲಾಗುವುದು ಎಂದರಲ್ಲದೆ ಈ ಜನಸಂಪರ್ಕ ಸಭೆ ಯಶಸ್ವಿಯಾಗಲು ಸಹಕರಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ವಿನಂತಿಸಿದರು.
ಸಭೆಯಲ್ಲಿ ಎಂಬತ್ತಕ್ಕೂ ಹೆಚ್ಚು ಅರ್ಜಿಗಳನ್ನು ಶಾಸಕರಿಗೆ ಸಲ್ಲಿಸಿದರು. ಈ ಅರ್ಜಿಗಳನ್ನು ಅವುಗಳ ಮಹತ್ವ ಮತ್ತು ಅಗತ್ಯತೆಯನ್ನು ಆಧರಿಸಿ ವಿಲೇವಾರಿ ಮಾಡುವುದಾಗಿಯೂ ಅವರು ತಿಳಿಸಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಮೇಯರ್ ಕವಿತಾ ಸನಿಲ್ ಮಾತನಾಡಿ ಜನರು ಸಲ್ಲಿಸಿರುವ ಅರ್ಜಿಗಳಲ್ಲಿ ಹೆಚ್ಚಿನವು ನಗರಪಾಲಿಕೆಗೆ ಸೇರಿದವು. ಈ ಸಮಸ್ಯೆ ಬಗೆ ಹರಿಸಲು ನನಗೆ ಮೊದಲೇ ತಿಳಿಸಿದ್ದಾರೆ ಎಲ್ಲಾ ಅಧಿಕಾರಿಗಳು ಭಾಗವಹಿಸುವಂತೆ ಆದೇಶ ನೀಡುತ್ತಿದ್ದೆ. ಆದರೂ ನೀವು ಕೊಟ್ಟಿರುವ ಅರ್ಜಿಗಳನ್ನು ಶಾಸಕ ಜೆ.ಆರ್.ಲೋಬೊ ಅವರ ಮಾರ್ಗದರ್ಶನದಲ್ಲಿ ಕೂಡಲೇ ಬಗೆಹರಿಸುವುದಾಗಿ ಭರವಸೆ ಕೊಟ್ಟರು.
ಇದೇ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ ಅವರು ರಾಜ್ಯ ಸರ್ಕಾರದಿಂದ ಕೊಡಮಾಡಿದ ಪಿಂಚಿಣಿ ಆದೇಶಗಳನ್ನು ಹಸ್ತಾಂತರಿಸಿದರು.
ಸಮಾರಂಭದಲ್ಲಿ ನಗರಪಾಲಿಕೆ ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಭಿತಾ ಮಿಸ್ಕಿತ್, ಕೇಶವ ಮರೋಳಿ, ಪ್ರಕಾಶ್ ಅಳಪೆ, ಜಾನ್ ಫೆರ್ನಾಂಡಿಸ್, ಐರಿನ್ ಪಿಂಟೊ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.