ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸಹನೆ ಮತ್ತು ಸಹಿಷ್ಣತೆಯನ್ನು ಕಾಪಾಡಿ ಕೋಮು ಸೌಹಾರ್ದತೆಯನ್ನು ಉಳಿಸಿಕೊಂಡು ಹೋಗುವಂತೆ ಶಾಸಕ ಜೆ.ಆರ್.ಲೋಬೊ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅವರು ಒಂದು ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆ ಸರ್ವ ಮತ, ಧರ್ಮಕ್ಕೆ ಹೆಸರು ಪಡೆದಿದ್ದು ಅದನ್ನು ಯಾರೂ ಕೆಡಿಸಬಾರದು. ಕ್ಷುಲ್ಲಕ ಕಾರಣಕ್ಕೆ, ರಾಜಕೀಯ ಲಾಭಕ್ಕೆ ಅನಾದಿ ಕಾಲದಿಂದ ಇದ್ದ ಹೆಸರನ್ನು ಕೆಡಿಸುವುದು ಸೂಕ್ತವಲ್ಲ. ಇದು ನಮ್ಮ ಜಿಲ್ಲೆಗೂ ಶೋಭೆ ತರುವುದಿಲ್ಲ ಎಂದಿದ್ದಾರೆ.
ವಿಶೇಷವಾಗಿ ಮಂಗಳೂರು ಈಗ ಸ್ಮಾರ್ಟ್ ಸಿಟಿಯಾಗುತ್ತಿದೆ. ಜಿಲ್ಲೆಯನ್ನು ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ. ಮಂಗಳೂರು ನಗರ ಜೀವಿಸುವುದಕ್ಕೆ ಅತ್ಯಂತ ಪ್ರಶಸ್ತ ನಗರವೆಂದು ಜಗತ್ತಿನಲ್ಲೇ ಮೊದಲ ಸ್ಥಾನ ಸಿಕ್ಕಿದೆ. ಇಂತಹ ಜಿಲ್ಲೆಯನ್ನು ಇನ್ನಷ್ಟು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿರುವ ಶಾಸಕ ಜೆ.ಆರ್.ಲೋಬೊ ಅವರು ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿಗೆ ಶಿಕ್ಷಣ ಪಡೆಯಲು ಹೊರ ಜಿಲ್ಲೆಯ ವಿದ್ಯಾರ್ಥಿಗಳು ಅಪಾರ ಪ್ರಮಾಣದಲ್ಲಿ ಬರುತ್ತಿದ್ದಾರೆ. ಕೈಗಾರಿಕೆಗಳು ಇನ್ನೂ ಹೆಚ್ಚು ಸ್ಥಾಪನೆಯಾಗಬೇಕು. ಉದ್ಯೋಗಾವಕಾಶಗಳು ಹೆಚ್ಚಾಗಬೇಕು, ಬಂಡವಾಳ ಹರಿದು ಬರಬೇಕು. ಇದಕ್ಕೆಲ್ಲಾ ನಾವು ಸನ್ನದ್ಧರಾಗಿ ಅವಕಾಶ ಕೊಡುವಂತಾಗಬೇಕು ಎಂದಿದ್ದಾರೆ.
ಅಹಿತಕರ ಘಟನೆಗಳು ಸಂಭವಿಸುತ್ತಾ ಹೋದರೆ ಜಿಲ್ಲೆ ಅಭಿವೃದ್ಧಿ ಕುಂಟಿತಗೊಳಿಸುತ್ತವೆ. ಬಂಡವಾಳ ಹೂಡಿಕೆ ಮಾಡಲು ಹೂಡಿಕೆದಾರರು ಹಿಂಜರಿಯುತ್ತಾರೆ. ಕೈಗಾರಿಕೆಗಳು ಸ್ಥಾಪನೆಯಾಗಲು ಅಡ್ಡಿಯಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ಜಿಲ್ಲೆಯ ಜನತೆ ತುಂಬಾ ಎಚ್ಚರಿಕೆಯಿಂದ ನೋಡಬೇಕು ಎಂದು ಹೇಳಿದ್ದಾರೆ.
ನಮ್ಮದು ಐಕ್ಯಮತ್ತೆಯನ್ನು ಎತ್ತಿಹಿಡಿದ ಜಿಲ್ಲೆ. ಸಹಿಷ್ಣುತೆಯನ್ನು ಕಾಪಾಡಿ ಸರ್ವಧರ್ಮವನ್ನು ಪೋಷಿಸುತ್ತಾ ಬಂದ ಇತಿಹಾಸವಿರುವ ಜಿಲ್ಲೆ. ಇಂತಹ ಇತಿಹಾಸವನ್ನು ಹಾಳುಮಾಡುವ ಕೆಲಸವನ್ನು ಯಾರೂ ಮಾಡಬಾರದು. ಈಗ ನಡೆದಿರುವ ಘಟನೆಗಳಿಗೆ ಕಾನೂನು ರೀತಿಯಲ್ಲಿ ಕ್ರಮ ಜರುಗುತ್ತದೆ. ಈ ಜಿಲ್ಲೆಯ ಜನರು ಒಂದಾಗಿ ಬಾಳೋಣ, ಜಿಲ್ಲೆಯ ಅಭಿವೃದ್ಧಿಯನ್ನು ಸಾಧಿಸೋಣ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಜೀವಿಸುವ ಎಂದೂ ಲೋಬೊ ಅವರು ಮನವಿ ಮಾಡಿದ್ದಾರೆ.