ಮಂಗಳೂರು: ಅಸಂಘಟಿತ ಹೊಲಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಮತ್ತು ಅಪಘಾತ ಪರಿಹಾರ ಯೋಜನೆ, ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಅಸಂಘಟಿತ ಹೊಲಿಗೆ ಕಾರ್ಮಿಕರು 2002 ರಿಂದ ಈ ಬೇಡಿಕೆಗಾಗಿ ಹೋರಾಟ ಮಾಡುತ್ತಿದ್ದರು. ರಾಜ್ಯದಲ್ಲಿರುವ 3.9೦ ಹೊಲಿಗೆ ಕಾರ್ಮಿಕರಿಗೆ ಈಗ ಭವಿಷ್ಯ ನಿಧಿ ಸಹಿತ ಇತರ ಸವಲತ್ತು ಸಿಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಮಾಲಿಗಳು, ಚಿಂದಿ ಆಯುವವರು, ಬೀದಿ ಬದಿ ವ್ಯಾಪಾರ ಮಾಡುವರು ಹಾಗೂ ಹೊಲಿಗೆ ಕಾರ್ಮಿಕರು ಈ ಭವಿಷ್ಯ ನಿಧಿ ಸೌಲಭ್ಯಕ್ಕೆ ಭಾಜನರು.
ಪ್ರತೀ ವರ್ಷವೂ ಹೊಲಿಗೆ ಕಾರ್ಮಿಕರು ಈ ಯೋಜನೆಗಳು ಸಿಗಬೇಕೆಂದು ಮನವಿ ಕೊಡುತ್ತಿದ್ದರು. ಈ ಸಲ ಶಾಸಕ ಜೆ.ಆರ್.ಲೋಬೊ ಅವರ ಮೂಲಕ ಹೊಲಿಗೆ ಕಾರ್ಮಿಕರು ಪಟ್ಟು ಹಿಡಿದು ಬೇಡಿಕೆ ಈಡೇರಿಸುವಂತೆ ಹಕ್ಕೊತ್ತಾಯ ಮಾಡಿದರು. ಬಜೆಟ್ ಪೂರ್ವ ಭಾವಿಗೂ ಮುನ್ನವೇ ಶಾಸಕ ಜೆ.ಆರ್.ಲೋಬೊ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಈ ಬೇಡಿಕೆಯನ್ನು ಈಡೆರಿಸುವಂತೆ ಒತ್ತಾಯಿಸಿದ್ದರು.
ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಪ್ರವೀಣ್ ಸಾಲಿಯಾನ್ ಅವರು ಈ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ತಮ್ಮ ಜೊತೆ ಬೆಂಗಾವಲಾಗಿ ನಿಂತ ಶಾಸಕ ಜೆ.ಆರ್.ಲೋಬೊ ಅವರನ್ನು ಅಭಿನಂದಿಸಿದ್ದಾರೆ.