ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಪುಟಾಣಿ ರೈಲಿಗಾಗಿ ಮಕ್ಕಳು ನಿರೀಕ್ಷಿಸುತ್ತಿದ್ದ ಕಾಲ ಬರುತ್ತಿದೆ. ಸುಮಾರು 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಪುಟಾಣಿ ರೈಲನ್ನು ಶಾಸಕ ಜೆ.ಆರ್.ಲೋಬೊ ಅವರು ಇದೀಗ ತರುತ್ತಿದ್ದಾರೆ.
ಕದ್ರಿಪಾರ್ಕ್ ನಲ್ಲಿ 1983 ರಲ್ಲಿ ಮಕಳಿಗಾಗಿ ಆರಂಭಿಸಿದ್ದ ಪುಟ್ಟಾಣಿ ರೈಲು 2013 ರವರೆಗೆ ನಿರಾತಂಕವಾಗಿ ಸಾಗಿತ್ತು. ಮಕ್ಕಳು ಖುಷಿ ಪಟ್ಟಿದ್ದರು ಕೂಡಾ. ಆದರೆ ಈ ರೈಲು ಇದ್ದಕ್ಕಿದ್ದಂತೆಯೇ ತಟಸ್ಥವಾದಾಗ ಮಕ್ಕಳ ಮನಸ್ಸಿನಲ್ಲಿದ್ದ ಮಂದಹಾಸ ಮಂಕಾಯಿತು.
ಜನಪ್ರತಿನಿದ್ಧಿಗಳು ಕೂಡಾ ಈ ರೈಲನ್ನು ಆರಂಭಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಲಿಲ್ಲ. ರೈಲು ಮತ್ತೆ ಆರಂಭವಾಗುತ್ತದೆ ಎಂದು ಮಕ್ಕಳು ಕಾಯುತ್ತಾ ಹೋದರು. ಆದರೆ ರೈಲು ಶುರುವಾಗಲೇ ಇಲ್ಲ. ತಾಂತ್ರಿಕ ಅಡಚಣೆಯಿಂದ ಇದರ ಚಾಲನೆ ನಿಂತಿದೆ ಎಂದು ಹೇಳಿದ ಅಧಿಕಾರಿಗಳು ಮತ್ತೆ ತಾಂತ್ರಿಕ ದೋಷ ನಿವಾರಿಸಿ ಪುನರಾರಂಭಿಸು ಬಗ್ಗೆ ಯಾವುದೇ ಕೆಲಸ ಮಾಡಲಿಲ್ಲ.
ಜೆ.ಆರ್.ಲೋಬೊ ಶಾಸಕರಾದ ಮೇಲೆ ಈ ರೈಲಿಗೆ ಜೀವ ಕಳೆ ಬಂತು. ಅವರು ಸರ್ಕಾರದ ಜೊತೆ ಮಾತುಕತೆ ನಡಿಸಿ ಈ ರೈಲನ್ನು ಆರಂಭಿಸುವ ಬಗ್ಗೆ ಗಮನ ಸೆಳೆದರು. ಆ ಫಲವಾಗಿ ಮತ್ತೆ ರೈಲು ಆರಂಭವಾಗುವ ಸೂಚನೆ ಬಂತು.
63 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂಟಾಣಿ ರೈಲಿನ ಇಂಜಿನ್ ಮತ್ತು 3 ಬೋಗಿಗಳು ಮೈಸೂರಿನ ರೈಲ್ವೇ ಕಾರ್ಯಾಗಾರದಲ್ಲಿ ನಿರ್ಮಾಣವಾಗುತ್ತಿದೆ. ಈ ವರ್ಷದ ಕೊನೆಯೊಳಗೆ ಮತ್ತೆ ರೈಲು ಓಟ ಶುರು ಮಾಡಬೇಕು ಎನ್ನುವುದು ಜೆ.ಆರ್.ಲೋಬೊ ಅವರ ಕಲ್ಪನೆ. ಅದಕಾಗಿ ಕೆಲಸ ಭರದಿಂದ ನಡೆಯುತ್ತಿದೆ.
ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದವರು ಈ ಪುಟ್ಟಾಣಿ ರೈಲಿಗೆ ಜೀವ ತುಂಬುತ್ತಿದ್ದಾರೆ. ರೈಲ್ವೇ ಇಲಾಖೆಯ ತಾಂತ್ರಿಕ ನೆರವಿನೊಂದಿಗೆ ರೈಲ್ವೇ ಹಳಿ ಪರಿರ್ವತನೆ ಕೆಲಸ ಮಾಡಲಾಗಿತ್ತಿದೆ. ಈಗಾಲೇ ಇರುವ ಫ್ಲಾಟ್ ಫಾರಂ ಹಾಗೂ ರೈಲ್ವೇ ಶೆಡ್ಡನ್ನು ತೆರವುಗೊಳಿಸಿ ಪಕ್ಕಾ ಸುಸಜ್ಜಿತವಾದ ರೈಲನ್ನು ಆರಂಭಿಸುತ್ತಾರೆ. ಎಲ್ಲವೂ ಸುಸೂತ್ರವಾಗಿ ಪೂರ್ಣಗೊಂಡರೆ ಹೊಸ ವರ್ಷದಲ್ಲಿ ಪುಟಾಣಿ ರೈಲು ಮತ್ತೆ ಚುಕು ಪುಕು ಸದ್ದು ಮಾಡುತ್ತದೆ. ಆ ದಿನಗಳು ಆದಷ್ಟು ಬೇಗ ಬರಲಿ ಎನ್ನುತ್ತಿದ್ದಾರೆ ಶಾಸಕ ಜೆ.ಆರ್.ಲೋಬೊ, ಅಂತೆಯೇ ಪುಟಾಣಿ ರೈಲಿನಲ್ಲಿ ಕುಳಿತು ಖುಷಿ ಪಡುವ ತವಕದಲ್ಲಿದ್ದಾರೆ ಮಕ್ಕಳು.