ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು ಪ್ರಾಥಮಿಕ ಶಾಲೆಯ ಪಾಠ ಪುಸ್ತಕದಲ್ಲಿದ್ದ ಪಾಠವನ್ನು ಓದುವ ಅನಿವಾರ್ಯತೆ ಬಂದಾಗ. ಆಗ ನನ್ನ ಗಮನವೆಲ್ಲಾ ಕೇವಲ ಎರಡು ಅಂಶಗಳಲ್ಲಿ ಮಾತ್ರ. ಅವರು ಜನ್ಮ ತಳೆದ ವರ್ಷ, ದಿನಾಂಕ ಮತ್ತು ಅವರು ಸತ್ತ ವರ್ಷ ಮತ್ತು ದಿನಾಂಕ. ಇದಕ್ಕೆ ಕಾರಣವೆಂದರೆ ಪರೀಕ್ಷೆಯಲ್ಲಿ ಕೇಳುತ್ತಿದ್ದ ಪ್ರಶ್ನೆಗಳು ಕೂಡಾ ಇದೇ ಆಗಿರುತ್ತಿದ್ದವು. ಹೆಚ್ಚೆಂದರೆ ಅವರು ಪ್ರತಿಪಾದಿಸುತ್ತಿದ್ದ ಸತ್ಯ, ಅಹಿಂಸೆ ಮತ್ತು ತ್ಯಾಗ. ಇವಿಷ್ಟು ಗೊತ್ತಿದ್ದರೆ ಗಾಂಧಿಯ ಕುರಿತಾದ ಪ್ರಶ್ನೆಗಳಿಗೆ ಉತ್ತರ ಬರೆಯುವುದು ಸುಲಭ ಎನ್ನುವುದು ನನ್ನ ತಿಳುವಳಿಕೆ.

ಮತ್ತೆರಡು ತರಗತಿ ಮೆಟ್ಟಿಲು ಏರಿದ ಮೇಲೆ ಅದೇ ಗಾಂಧಿಯ ಬಗ್ಗೆ ಮತ್ತಷ್ಟು ಮಾಹಿತಿ ಸಿಗುತ್ತಿತ್ತು. ಅವರನ್ನು ದಕ್ಷಿಣ ಆಫ್ರಿಕಾದಲ್ಲಿ ಅವಮಾನಿಸಿದ್ದು ರೈಲು ಬೋಗಿಯಿಂದ ಹೊರದಬ್ಬಿದ್ದು. ಹತ್ತನೇ ತರಗತಿಯವರೆಗೂ ಗಾಂಧೀಜಿ ಎಂದರೆ ಪರೀಕ್ಷೆಗೆ ಬರೆಯಲು ಬೇಕಾಗುವಷ್ಟನ್ನು ಚೆನ್ನಾಗಿ ಕಲಿಯುವ ಅನಿವಾರ್ಯತೆಯಿಂದಾಗಿ ನನ್ನ ಗಾಂಧಿ ಬಗೆಗಿನ ಗ್ರಹಿಕೆ ಪ್ರಶೋತ್ತರಕ್ಕೆ ಸೀಮಿತವಾಗಿತ್ತು.

ಬುದ್ಧ, ಅಂಬೇಡ್ಕರ್, ಬಸವಣ್ಣನನ್ನು ಓದುವ ಕಾಲಕ್ಕೆ ಈ ಮೂರೂ ಜನರು ಗಾಂಧಿಯಲ್ಲಿ ಕಾಣತೊಡಗಿದರು. ಬುದ್ಧ ಮತ್ತು ಬಸವಣ್ಣನನ್ನು ಗಾಂಧೀಜಿಯೂ ನೋಡಿರಲಿಲ್ಲ, ಆದರೆ ಅವರಿಬ್ಬರ ಪ್ರಭಾವಕ್ಕೂ ಒಳಗಾಗಿದ್ದರು. ಅಂಬೇಡ್ಕರ್ ಗಾಂಧಿಯವರಿಗೆ ಕಿರಿಯರು, ಒಡನಾಟವಿತ್ತು. ಹಿರಿಯರನ್ನು ಒಪ್ಪಿಕೊಳ್ಳುತ್ತಿದ್ದ ಗಾಂಧಿ ತನಗಿಂತ ಕಿರಿಯರಾಗಿದ್ದ ಅಂಬೇಡ್ಕರ್ ಅವರ ಚಿಂತನೆಯನ್ನೂ ಗೌರವಿಸುತ್ತಿದ್ದರು, ತಮಗೆ ಸರಿಯಲ್ಲವೆಂದಾದರೆ ಮುಲಾಜಿಲ್ಲದೆ ವಿರೋಧಿಸುತ್ತಿದ್ದರು. ಇವರಲ್ಲಿ ಯಾರನ್ನೂ ನೋಡದ ನಾನು ಅವರೆಲ್ಲರನ್ನೂ ಈಗ ಗ್ರಹಿಸಬೇಕಾಗಿದೆ. ಹೀಗೆ ಗ್ರಹಿಸುವಾಗ ಗಾಂಧೀಜಿ ಮತ್ತು ಅಂಬೇಡ್ಕರ್ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯವಿತ್ತು ಎನ್ನುವುದು ತೋರಿಕೆಗೆ ಕಂಡು ಬರುವ ಸತ್ಯವೂ ಹೌದು.

ಗಾಂಧಿ ಬಹುಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು ವಿಶಾಲ ಮನಸ್ಥಿತಿಯಲ್ಲಿ ಚಿಂತಿಸುವಂತೆ ಹೇಳಿದರೆ ಅಂಬೇಡ್ಕರ್ ಹಾಗೆ ಚಿಂತಿಸಲು ಸಾಧ್ಯವಿಲ್ಲ, ತಾನು ಏಕಾಂಗಿ, ತನ್ನೊಬ್ಬನ ಸ್ವರ ಸಾಕಾಗುವುದಿಲ್ಲವೆಂದು ಪ್ರತಿಪಾದಿಸುತ್ತಿದ್ದರು.

ಅಸ್ಪ್ರಶ್ಯತೆ ನಿವಾರಣೆಗೆ ದೇವಸ್ಥಾನ ಸ್ಥಾಪಿಸುವುದು, ಪ್ರತ್ಯೇಕ ಬಾವಿ ತೋಡಿಸಿ ಸಮುದಾಯದವರಿಗೆ ನೀರು ಒದಗಿಸುವುದು ಪರಿಹಾರವಲ್ಲ ಮತ್ತು ಒಂದರ್ಥದಲ್ಲಿ ವ್ಯರ್ಥ. ಅದರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗುವಂತಾಗಬೇಕು ಎನ್ನುತ್ತಿದ್ದರು ಅಂಬೇಡ್ಕರ್.

ಇದು ಸುಮಾರು 1930-34 ರ ಎಳೆಗೆ ಅಂಬೇಡ್ಕರ್ ಮತ್ತು ಗಾಂಧಿ ನಡುವೆ ನಡೆಯುತ್ತಿದ್ದ ಗಂಭೀರ ಚರ್ಚೆ ಕೂಡಾ. ಇಷ್ಟು ವರ್ಷಗಳಾದ ಮೇಲೂ ಅಂದಿನ ಈ ಇಬ್ಬರ ನಡುವಿನ ಮಾತುಕತೆ-ಚರ್ಚೆ ಈಗಲೂ ಅದೇ ಸ್ಥಿತಿಯಲ್ಲಿವೆ. ಗಾಂಧಿವಾದವೂ ಇದೆ, ಅಂಬೇಡ್ಕರ್ ಹಕ್ಕೊತ್ತಾಯವೂ ಜೀವಂತವಾಗಿದೆ. ಆದರೆ ಅವರಿಬ್ಬರೂ ಇಲ್ಲ. ಅವರಿಬ್ಬರ ಪ್ರತಿನಿಧಿಗಳು, ಅವರ ಮನಸ್ಥಿತಿಯವರು ಮಾತ್ರ ಇದ್ದಾರೆ ಅನ್ನಿಸುತ್ತಿದೆ.

ಇಂಥ ದ್ವಂದ್ವಗಳು ಸ್ವಾತಂತ್ರ್ಯ ಪೂರ್ವದಲ್ಲೂ ನಾಯಕರಲ್ಲಿ ಇದ್ದವು ಎನ್ನುವುದು ವಾಸ್ತವ. ಈಗ ಬಹುಪಕ್ಷ, ಆಗ ಒಂದೇ ಪಕ್ಷ, ಆಗ ಸ್ವಾತಂತ್ರ್ಯ ಪಡೆಯಬೇಕು ಎನ್ನುವ ಏಕೈಕ ಗುರಿ. ಈಗ ಅನೇಕ ಪಕ್ಷ, ಅನೇಕ ನಾಯಕರು, ಹಲವು ಗುರಿಗಳು. ಏನೇ ಗೊಂದಲವಿದ್ದರೂ ಆಗ ಗಾಂಧಿಯೇ ಗುರು, ಸ್ವಾತಂತ್ರ್ಯ ಪಡೆಯುವುದೇ ಗುರಿ.

ಅಚ್ಚರಿಯ ಸಂಗತಿಯೆಂದರೆ ಸ್ವಾತಂತ್ರ್ಯ ಪಡೆಯುವ ಹೋರಾಟದ ನಡುವೆಯೂ ಮನುಷ್ಯ-ಮನುಷ್ಯರ ನಡುವಿನ ಸಾಮಾಜಿಕ ವಿರೋಧಾಭಾಸಗಳು ಜೀವಂತವಾಗಿದ್ದವು ಎನ್ನುವುದನ್ನು ಗಾಂಧಿ ಮತ್ತು ಅಂಬೇಡ್ಕರ ಅವರನ್ನು ಓದುವಾಗ ಕಣ್ಣಿಗೆ ರಾಚುತ್ತದೆ.

ಅಂಬೇಡ್ಕರ್ ಶೋಷಿತ ಸಮುದಾಯದ ಧ್ವನಿಯಾಗಿ, ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ಗಾಂಧಿ ಶೋಷಿತರನ್ನು ಅನುಕಂಪದಿಂದ ನೋಡುತ್ತಲೇ ಶೋಷಣೆ ಮಾಡುತ್ತಿದ್ದವರನ್ನು ಖಡಾಖಂಡಿತವಾಗಿ ವಿರೋಧಿಸಲಾಗದೆ ಅತ್ಯಂತ ಜಾಗರೂಕತೆಯಿಂದ ಇಬ್ಬರನ್ನೂ ನಿಭಾಯಿಸುತ್ತಾರೆ. ಅಂಬೇಡ್ಕರ ಬಯಸುತ್ತಿದ್ದ ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಗಾಂಧಿ ವಿರೋಧಿಸುತ್ತಿರಲಿಲ್ಲ ಆದರೆ ತುಂಬಾ ಮೃದುವಾಗಿ ಇಂಥ ಬದಲಾವಣೆಯನ್ನು ಪ್ರತಿಪಾದಿಸುತ್ತಿದ್ದರು ಅನ್ನಿಸುತ್ತದೆ. ಈ ಕಾರಣದಿಂದಲೇ ಅಂಬೇಡ್ಕರ ಗಾಂಧಿ ಬಗ್ಗೆ ಬೇಸರವಾಗುತ್ತಿದ್ದರು ಎನ್ನುವುದೂ ಕೂಡಾ ನಿಜ.

ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳುವುದು ಎಂದರೆ ಈಗಲೂ ಜೀವಂತವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಎಂದೇ ಅರ್ಥ. ಗಾಂಧಿ ಸಮನ್ವಯತೆ ಸಾಧಿಸಲು ಹೊರಟರೆ ಅಂಬೇಡ್ಕರ್ ಏಕಾಂಗಿಯಾಗಿ ಗುರಿ ತಲುಪಲು ಉತ್ಸುಕರಾಗುವುದನ್ನು ಗುರುತಿಸಬಹುದು.

ಗಾಂಧಿ ಕಾಲಾನಂತರ ಅಂಬೇಡ್ಕರ್ ಒಂಟಿಯಾದರು ಅನ್ನಿಸುವುದೂ ಕೂಡಾ ಇದೆ. ಅವರು ರಾಜೀನಾಮೆ ಕೊಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಳ್ಳುವ ಸನ್ನಿವೇಶವನ್ನು ಅರ್ಥಮಾಡಿಕೊಂಡರೆ ಆ ಸೋಲು ಇಡೀ ಸಮುದಾಯದ ಸೋಲು ಮತ್ತು ಅದು ಅವರು ಪ್ರತಿಪಾದಿಸುತ್ತಿದ್ದ ಮೌಲ್ಯಗಳ ಸೋಲು ಕೂಡಾ ಎನ್ನಬಹುದು. ಕೈಗಾರಿಕೀಕರಣ ಮತ್ತು ಕೃಷಿ ಕೈಗಾರಿಕೆಯಲ್ಲೂ ಬಂಡವಾಳ ಹೂಡಿಕೆ ಈ ದೇಶದ ಒಟ್ಟು ಆರ್ಥಿಕ ಶಕ್ತಿ ವೃದ್ಧಿಗೆ ಕಾರಣವಾಗುತ್ತದೆಂದು ಅಂಬೇಡ್ಕರ್ ಅಂದೇ ಪ್ರತಿಪಾದಿಸುತ್ತಿದ್ದರು. ಈಗ ಅದನ್ನು ಒಪ್ಪಿಕೊಳ್ಳುತ್ತಿರುವ ಕಾಲಘಟವನ್ನು ಗಮನಿಸಿದರೆ ಇದನ್ನು ಅಂದೇ ಮಾಡಿದ್ದರೆ ?.

ಗಾಂಧಿ ಗುಡಿ ಕೈಗಾರಿಕೆ, ಹಳ್ಳಿಗಳ ಉದ್ಧಾರ ಬಯಸಿದರೆ ಈಗ ಹಳ್ಳಿಗಳನ್ನು ಸರ್ವನಾಶ ಮಾಡಿ, ಗುಡಿಕೈಗಾರಿಕೆಗಳನ್ನು ಯಂತ್ರಕೈಗಾರಿಕೆಗಳನ್ನಾಗಿ ಮಾಡಿ ಗಾಂಧಿಯನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ಗಾಂಧಿ ಮತ್ತು ಅಂಬೇಡ್ಕರ್ ಏಕಮುಖವಾಗಿ ಚಿಂತನೆ ಮಾಡಿದ್ದರೆ, ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದರೆ ಈ ದೇಶದ ಚಿತ್ರಣವೇ ಬದಲಾಗುತ್ತಿತ್ತು ಎನ್ನುವುದನ್ನು ಈಗ ಊಹಿಸಬಹುದು.

ದುರಂತವೆಂದರೆ ಗಾಂಧಿ ಈಗ ಮೂರು ದಿನ ನೆನಪಾಗುತ್ತಾರೆ. ಅವರ ಜನ್ಮ ದಿನ, ಅವರ ಹತ್ಯೆಯ ದಿನ, ಭಾರತ ಸ್ವಾತಂತ್ರ್ಯ ದಿನ. ಅಂತೆಯೇ ಅಂಬೇಡ್ಕರ ಮಾನವತಾವಾದಿಯಾಗಿ ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ಹೋರಾಡಿದರೂ ಅವರನ್ನು ಅಸ್ಪ್ರಶ್ಯರಂತೆಯೇ ಸಮಾಜ ಅರ್ಥಮಾಡಿಕೊಳ್ಳುತ್ತಿದೆ, ಇದನ್ನೇ ದುರಂತವೆನ್ನುವುದು. ಇದೇ ಗಾಂಧಿ ಮತ್ತು ಅಂಬೇಡ್ಕರ್ ಅವರಿಗಿರುವ ಸಾಮಾಜಿಕ ಸಮಾನತೆಯಲ್ಲಿನ ಭಿನ್ನಮತ. ಗಾಂಧಿ ಅನುಕಂಪ ಬಯಸುತ್ತಾರೆ ಆದರೆ ಅದನ್ನು ಅಂಬೇಡ್ಕರ್ ನಿರಾಕರಿಸುತ್ತಾರೆ.

-ಚಿದಂಬರ ಬೈಕಂಪಾಡಿ

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಶಾಸಕ ಜೆ.ಆರ್.ಲೋಬೊ ಅವರ ವಿಶೇಷ ಶಿಫಾರಸಿನ ಮೇರೆಗೆ ಉಮೇಶ್ ಅತ್ತಾವರ್ ಅವರಿಗೆ ಆಟೋರಿಕ್ಷಾವನ್ನು ನೀಡಿದರು. ಶಾಸಕ ಜೆ.ಆರ್.ಲೋಬೊ ಅವರು ಆಟೋರಿಕ್ಷಾದ ಕೀಯನ್ನು ಹಸ್ತಾಂತರಿಸಿದರು.