ಮಂಗಳೂರು: ನಗರ ಶಾಸಕ ಜೆ. ಆರ್ ಲೋಬೊರವರು ವಿವಿಧ ಇಲಾಖೆಗಳ ಬೇಡಿಕೆಯ ಕುರಿತು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಪ್ರದೇಶದಲ್ಲಿ ಪಂಚಾಯತ್ ರಾಜ್ ಇಲಾಖೆಯು ಜಾರಿಗೆ ತಂದಿರುವ ನಮೂನೆ 9 ಮತ್ತು 11ರಿಂದ ಆಗುವ ತೊಂದರೆಯನ್ನು ಸವಿಸ್ತಾರವಾಗಿ ಸದನದಲ್ಲಿ ಇಂದು ಪ್ರಸ್ತಾಪಿಸಿದರು.
ಪಂಚಾಯತ್ಗಳಲ್ಲಿ ನಮೂನೆ 9 ಮತ್ತು 11 ಕೇವಲ ತೆರಿಗೆ ನಿರ್ದರನೆ ಹಾಗೂ ವಸೂಲಾತಿಗೆ ಮಾತ್ರ ಸೀಮಿತಗೊಳಿಸಬೇಕಾಗಿ ಹಾಗೂ ಅದನ್ನು ನೋಂದಾವಣಿ ಅಥವಾ ಇನ್ನಿತರ ಯಾವುದೇ ಹಕ್ಕಿನ ದಾಖಲೆಯನ್ನಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿನ ನಮೂನೆ 9 ಮತ್ತು 11 ಯಿಂದ ಜನ ಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗಳನ್ನು ಶಾಸಕರು ಸದನದಲ್ಲಿ ವಿವರಿಸಿದರು.
ಇದಕ್ಕೆ ಉತ್ತರಿಸಿ ಮಾತನಾಡಿದ ಪಂಚಾಯತ್ ರಾಜ್ ಸಚಿವರು, ನಮೂನೆ 9 ಮತ್ತು 11 ಕುರಿತು ಚರ್ಚಿಸಲು ಒಂದು ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು ಎಂದು ಆಶ್ವಾಸನೆ ನೀಡಿದರು.
ಬಳಿಕ ಕಂದಾಯ ಇಲಾಖೆಯ ಕುರಿತು ಶಾಸಕರು ಮಾತನಾಡಿ, ಆರ್.ಟಿ.ಸಿಗಳನ್ನು ಹಾಗು ಹಕ್ಕು ಬದಲಾವಣೆಗಳನ್ನು ಮಾಡುವಲ್ಲಿ ಇರುವ ಸಮಸ್ಯೆಗಳನ್ನು ಸದನದಲ್ಲಿ ಶಾಸಕರು ವಿವರಿಸಿದರು. ದಿನಾಂಕ 31-05-2006 ಇದರ ನಂತರ ಹಾಗು ಇದರು ಹಿಂದೆ ಕಂಪ್ಯೂಟಿಕೃತಗೊಂಡ ಅರ್.ಟಿ.ಸಿಯಲ್ಲಿ ಹಕ್ಕು ಬದಲಾವಣೆಗೆ ಇರುವ ತೊಂದರೆಯನ್ನು ವಿವರಿಸಿದರು. ನಗರ ಯೋಜನೆ ಇಲಾಖೆ ತಯಾರಿಸಿರುವ ಸಿ.ಡಿ.ಪಿ ಅನ್ವಯ ಭೂಮಿಗಳನ್ನು ಸುಲಭದಲ್ಲಿ ಕನ್ವರ್ಷನ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಹಾಗೂ ಪ್ರಸ್ತುತ ಇರುವ ಕಂದಾಯ ಅಧಿಕಾರಗಳು ನೀಡುವ ಮಂಜೂರಾತಿ ಪದ್ದತಿಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು.
ನೆಮ್ಮದಿ ಕೇಂದ್ರದಲ್ಲಿ ಆಗುವ ವಿಳಂಬ, ವಿವಿಧ ದೃಢ ಪ್ರತಿಗಳನ್ನು ಪಡೆಯಲು ಸಾರ್ವಜನಿಕರು ಪಡುವ ತೊಂದರೆಯನ್ನು ವಿವರಿಸಿ ಅದನ್ನು ಕೂಡಲೇ ಸರಿಪಡಿಸಲು ಒತ್ತಾಯಿಸಿದರು.
ಕಂದಾಯ ಇಲಾಖೆಯ ಕಾರ್ಯವಿಧಾನವನ್ನು ಉತ್ತಮ ಪಡಿಸಲು ಈ ಹಿಂದೆ ಇರುವಂತೆ ದಿಟ್ಟಮ್ ಜಮಾಬಂದಿ ಹಾಗು ಹುಝುರ್ ಬಮಾಬಂದಿ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು, ಮೇಲಾಧಿಕಾರಿಗಳು ಧಪ್ತರ್ ತಪಾಸಣೆ, ಮೇಜು ತಪಾಸಣೆ ಮಾಡುವ ಕ್ರಮ ಜಾರಿಗೆ ತರಲು ಹಾಗು ಸರ್ವೇ ಕೆಲಸ ತೀವ್ರಗೊಳಿಸಲು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳನ್ನು ಸರ್ವೆಯಲ್ಲಿ ತರಬೇತಿ ನೀಡಿ ಅವರನ್ನು ಸರ್ವೆ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಕಂದಾಯ ಇಲಾಖೆಯ ದಾಖಲೆ ಪ್ರತಿಗಳನ್ನು ನೀಡಲು ವ್ಯವಸ್ಥಿv ರೀತಿಯಲ್ಲಿ ಕಂದಾಯ ದಾಖಲೆಗಳನ್ನು ಇಡುವಂತಹ ವ್ಯವಸ್ಥೆಯನ್ನು ತರಬೇಕೆಂದು ಆಗ್ರಹಿಸಿದರು.