ಪುರುಷರಕಟ್ಟೆ (ಪುತ್ತೂರು) ಏಪ್ರಿಲ್ 09 : ನಮ್ಮ ಕರಾವಳಿಯ ಪ್ರಾದೇಶಿಕ ಆಸ್ಮಿತೆಯನ್ನು ಕಾಪಾಡಿಕೊಂಡು ನಾವು ರಾಷ್ಟ್ರೀಯತೆಯನ್ನು ಬೆಳೆಸೋಣ. ಪ್ರಾದೇಶಿಕವಾಗಿ ಅಭಿವೃದ್ಧಿಯಾದಾಗಲೇ ದೇಶವು ಸಮೃದ್ಧಿಯಾಗುವುದು ಎಂದು ಭಾರತ ರಾಷ್ಚ್ರೀಯ ಕಾಂಗ್ರೆಸ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಅವರು ಇಂದು ಮಂಗಳವಾರ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಪುರುಷಕರ ಕಟ್ಟೆಯಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ನಡೆಸಿದರು.
ನಮ್ಮ ಕರಾವಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಲ್ಲದೆ ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ದೊರಕಿಸಿಕೊಡಬೇಕಾಗಿದೆ. ಅದೇ ರೀತಿ ನಮ್ಮ ಶ್ರೀಮಂತ ಜಾನಪದ ಕಲಾಪ್ರಕಾರಗಳು ಯಾವುದೇ ರಾಜಕೀಯದ ಮಾಲಿನ್ಯ ಇಲ್ಲದೆ ಬೆಳೆಯಬೇಕಾಗಿದೆ. ಅದೇ ರೀತಿಯಲ್ಲಿ ಪ್ರಾದೇಶಿಕವಾಗಿ ನಮ್ಮೂರಿನ ಮೂಲಭೂತ ಸೌಕರ್ಯಗಳ ದಿನ ಅಗತ್ಯಗಳಿಗ ತಕ್ಕಂತೆ ಅಭಿವೃದ್ಧಿ ಆಗಬೇಕಾಗಿದೆ. ಜನಪ್ರತಿನಿಧಿಯಾಗುವವನು ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದರು.
ಉಳ್ಳಾಲ ಶ್ರೀನಿವಾಸ ಮಲ್ಯ, ಜನಾರ್ದನ ಪೂಜಾರಿ ಅವರ ಕಾಲದಲ್ಲಿ ಬಂದಿದ್ದ ಮೂಲಭೂತ ಸೌಕರ್ಯಗಳಾದ ಹೆದ್ದಾರಿ, ರೈಲ್ವೇ ಇತ್ಯಾದಿ ವಿಸ್ತರಣೆ ಆಗಬೇಕಾಗಿದೆ. ನಮ್ಮ ಜಿಲ್ಲೆಯ ಅನೇಕ ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಅಭಿವೃದ್ಧಿ ಯಾವಾಗಲೊ ಆಗಬೇಕಾಗಿತ್ತು. ಅಂತಹ ಹತ್ತು ಹಲವಾರು ಯೋಜನೆಗಳು ತ್ವರಿತ ಗತಿಯಲ್ಲಿ ಅನುಷ್ಠಾನ ಆಗಬೇಕಾಗಿದೆ ಎಂದು ಮಿಥುನ್ ರೈ ಹೇಳಿದರು.
ಪುತ್ತೂರು ಮತ್ತು ಸುಳ್ಯ ಪರಿಸರದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರಗಳ ಕಾಲದಲ್ಲಿ ಸ್ಥಾಪನೆಯಾದ ಗೋಡಂಬಿ ಸೇರಿದಂತೆ ತೋಟಗಾರಿಕಾ ಕೃಷಿ ಸಂಶೋಧನಾ ಕೇಂದ್ರಗಳನ್ನು ಸ್ಥಗಿತಗೊಳಿಸುವ ಬದಲು ಇನ್ನಷ್ಟು ಉತ್ತಮಗೊಳಿಸುವುದರ ಅಗತ್ಯವಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ. ಆದರೆ, ನಮ್ಮ ಕೃಷಿ ಕ್ಷೇತ್ರ ಸುಸ್ಥಿರವಾಗಬೇಕಾದರೆ ಪೂರಕ ಆದಾಯ ಮೂಲಗಳು ರೈತನಿಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಕೃಷಿ ಆಧಾರಿತ ಕಾರ್ಯಕ್ರಮಗಳು ಬೇಕಾಗಿವೆ ಎಂಬು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರೊಂದಿಗೆ ಮಾಜಿ ಶಾಸಕಿ ಕೆ.ಶಕುಂತಳಾ ಶೆಟ್ಟಿ, ಮುಖಂಡರಾದ ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಮೊಹಮ್ಮದ್ ಬಡಗನ್ನೂರು, ವೇದನಾಥ ಸುವರ್ಣ ಮತ್ತಿತರ ಮುಖಂಡರು ಪ್ರಚಾರದಲ್ಲಿ ಭಾಗವಹಿಸಿದರು.
