ಮಂಗಳೂರುಃ ಬಿಜೆಪಿ ಸರ್ಕಾರವಿದ್ದಾಗ ಅಬಕಾರಿ ಇಲಾಖೆ ಸಚಿವರಾಗಿದ್ದ ಎಂ.ಪಿ. ರೇಣುಕಾಚಾರ್ಯ ಅವರೇನು ನಂದಿನಿ ಹಾಲು ಪ್ಯಾಕೇಟುಗಳನ್ನು ಮಾರಾಟ ಮಾಡುತ್ತಿದ್ರ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬಾರ್ ನಡೆಸುವವರ ಕಟ್ಟಡದಲ್ಲಿ ಚುನಾವಣಾ ಕಚೇರಿ ಮಾಡುವುದು ಸಂಸ್ಕೃತಿ ವಿರೋಧ ಮತ್ತು ಅನೈತಿಕವೆಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮೇಯರ್ ಮಹಾಬಲ ಮಾರ್ಲ ಅವರು, ಬಿಜೆಪಿ ಶಾಸಕರ ಸ್ನೇಹಿತರು ಬಾರುಗಳಲ್ಲಿ ಗೋವಿನ ಹಾಲು ಮಾರಾಟ ಮಾಡುತ್ತಿದ್ದಾರೆಯೇ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿಯವರ ಪ್ರಕಾರ ಕಾನೂನು ಪ್ರಕಾರ ಬಾರ್ ಆಂಡ್ ರೆಸ್ಟೋರೆಂಟ್, ವೈನ್ ಶಾಪ್, ಶೇಂದಿ ಮಾರಾಟ ನಡೆಸುವುದು ಸಮಾಜ ವಿರೋಧಿ ವ್ಯವಹಾರವೇ ? ಬಾರ್ ನವರು ಸಮಾಜ ದ್ರೋಹಿಗಳೇ? ವೇದವ್ಯಾಸ ಕಾಮತರು ಪ್ರತಿನಿಧಿಸುವ ಬಿಜೆಪಿ ಯಾವ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿದೆ ಎಂಬುದನ್ನು ಶಾಸಕರು ವಿವರಿಸಬೇಕು. ನಮ್ಮ ನಾಡಿನಲ್ಲಿ ಬಹುಸಂಸ್ಕೃತಿಯನ್ನು ಗೌರವಿಸುವ ಪರಂಪರೆ ಇದೆ. ಹಿಂದೂ ಸಮುದಾಯದಲ್ಲಿ ಬಹುಮಂದಿ ತಮ್ಮ ಧಾರ್ಮಿಕ ಆಚರಣೆಗಳಲ್ಲಿ ಮದ್ಯವನ್ನು ದೈವಗಳಿಗೆ, ಕಳೆದು ಹೋದ ಹಿರಿಯರಿಗೆ ಅರ್ಪಿಸುವ ಪದ್ಧತಿ ಈಗಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಅಂತಹ ಆಚರಣೆಯಲ್ಲಿ ವಿಶ್ವಾಸ ಇರುವ ಮಂದಿಯ ಓಟುಗಳು ಬಿಜೆಪಿ ಅಭ್ಯರ್ಥಿಗೆ ಬೇಡವೆಂಬುದು ಶಾಸಕರ ಮಾತುಗಳಿಂದ ಸ್ಪಷ್ಟವಾಗಿದೆ. ಶಾಸಕರು ಹತಾಶ ಮಾನೋಭಾವದಿಂದ ನೀಡಿರುವ ಹೇಳಿಕೆಗೆ ಮತದಾರರೇ ಸರಿಯಾದ ಉತ್ತರ ನೀಡುತ್ತಾರೆ ಎಂದು ಮಹಾಬಲ ಮಾರ್ಲ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿಯವರ ಪ್ರಚಾರ ಸಾಮಾಗ್ರಿಗಳ ಮಾರಾಟದ ಬಿಜೆಪಿ ಅಂಗಡಿ ಮೈ ಮೋದಿ ಮೈ ಪ್ರೈಡ್ ಹಂಪನಕಟ್ಟೆಯ ಮಿಸ್ಚೀಫ್ ಮಾಲ್ ನಲ್ಲಿ ಇದೆ. ಈ ಕಟ್ಟಡಕ್ಕೆ ಇದುವರೆಗೆ ಮಹಾನಗರಪಾಲಿಕೆ ಕಂಪ್ಲೀಷನ್ ಪ್ರಮಾಣಪತ್ರ ನೀಡಿಲ್ಲ. ಇದು ಸರಿಯೇ. ಪ್ರಧಾನಿ ಮೋದಿಯವರಿಗೆ ಮಾಡುವ ಅವಮಾನ ಅಲ್ಲವೇ ಮಾನ್ಯ ಶಾಸಕರೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಂದೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸುವ ಮೊದಲು ನಿಮ್ಮಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಬರುವುದು ಸೂಕ್ತ. ಇಲ್ಲದಿದ್ದಲ್ಲಿ, ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
