ಮಂಗಳೂರು: ಮಂಗಳೂರಲ್ಲಿ ನವೆಂಬರ್ ತಿಂಗಳಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದರು. ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಐಟಿ, ಬಿಟಿ ಸಚಿವರು ಮತ್ತು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು ಬರಬೇಕು. ಕನಿಷ್ಠ 20 ರಿಂದ 25 ದೊಡ್ಡ ಕಂಪೆನಿಗಳು ಪಾಲ್ಗೊಳ್ಳಬೇಕು ಎಂದೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಸಾಮಾನ್ಯವಾಗಿ ಬಂಡವಾಳ ಹೂಡಿಕೆ ಸಮಾವೇಶ ನಡೆದಾಗ ಮಂಗಳೂರನ್ನು ಹೂಡಿಕೆದಾರರಿಗೆ ಪ್ರೋತ್ಸಾಹಿಸುವ ಬದಲು ಬೆಂಗಳೂರನ್ನೇ ಹೆಚ್ಚು ಆಕರ್ಷಿಸುವ ಕೆಲಸವಾಗುತ್ತದೆ. ಈ ರೀತಿ ಆಗಬಾರದು. ಮಂಗಳೂರಲ್ಲಿ ಎಲ್ಲಾ ರೀತಿಯ ಸೌಕರ್ಯಗಳೂ ಲಭ್ಯ ಇವೆ. ಬೆಂಗಳೂರು ಸ್ಯಾಚುರೇಷನ್ ಅಂತ ತಲುಪಿದೆ.ಆದರೂ ಎಲ್ಲರೂ ಅಲ್ಲಿಯೇ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವಹಿಸುತ್ತಾರೆ ಎಂದು ವಿವರಿಸಿದರು.

ಈ ಸಲ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ಮಂಗಳೂರಲ್ಲಿ ಯಾಕೆ ಹೂಡಿಕೆ ಮಾಡಲು ಅನುಕೂಲಕರ ಎಂಬ ಬಗ್ಗೆ ಅವರಿಗೆ ಮನದಟ್ಟು ಮಾಡಬೇಕು ಎಂದು ನುಡಿದ ಶಾಸಕ ಲೋಬೊ ಅವರು ರಸ್ತೆ ಸಂಪರ್ಕ, ವಾಯು ಯಾನ ಸೇವೆ, ರೈಲು ಮತ್ತು ಬಂದರು ಈ ನಾಲ್ಕು ಸೇವೆಗಳೂ ದಕ್ಕುವ ಏಕೈಕ ನಗರ ಮಂಗಳೂರು ಎಂಬುದನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.

ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಅವರು ಮಾತನಾಡಿ ಬಂಡವಾಳ ಹೂಡಿಕೆದಾರರಿಗೆ ಮಂಗಳೂರನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ 15 ರಿಂದ 20 ನಿಮಿಷಗಳ ಅವಧಿಯ ಡಾಕ್ಯೂಮೆಂಟೆಷನ್ ಮಾಡಬೇಕು. ಅದರಲ್ಲಿ ಮಂಗಳೂರು ಯಾವೆಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ ಎಂಬ ಬಗ್ಗೆ ಮನಮುಟ್ಟುವಂತೆ ತೋರಿಸಬೇಕು ಎಂದರು.

ಬೆಂಗಳೂರಲ್ಲಿ ಎರಡನೇ ಸಭೆಯನ್ನು ನಡೆಸಬೇಕು. ಆ ಸಭೆಯಲ್ಲಿ ಶಾಸಕ ಜೆ.ಆರ್.ಲೋಬೊ ಮತ್ತು ಸಂಬಂಧಪಟ್ಟ ಸಚಿವರು ಕೂಡಾ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮಹಮದ್ ನಜೀರ್, ಮಂಗಳೂರು ನಗರಾಭಿವೃದ್ಧಿ ಕಮಿಷನರ್ ಶ್ರೀಕಾಂತ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.