ಮಂಗಳೂರು: ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಸಹಭಾಗಿತ್ವದಲ್ಲಿ 65 ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಇಂದು ಸುದ್ಧಿಗೋಷ್ಟಿ ನಡೆಸಿ ಕೇಂದ್ರ ಸರ್ಕಾರ 25 ಕೋಟಿ ನೀಡಿದ್ದು ಉಳಿಕೆ ಹಣವನ್ನು ರಾಜ್ಯ ಸರ್ಕಾರ ಪಾವತಿಸುವುದು ಎಂದರು.

ಲಕ್ಷದ್ವೀಪಕ್ಕೆ ಉನ್ನತ ಮಟ್ಟದ ನಿಯೋಗವನ್ನು ಕೊಂಡು ಹೋಗಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ನುಡಿದ ಅವರು ಅಲ್ಲಿನ ಸರ್ಕಾರ ವಿಶೇಷವಾಗಿ ಜೆಟ್ಟಿ ನಿರ್ಮಿಸಲು 68 ಕೋಟಿ ಕೊಡುವಂತೆ ಪ್ರಯತ್ನಿಸುದಾಗಿ ತಿಳಿಸಿದ ಶಾಸಕ ಜೆ.ಆರ್.ಲೋಬೊ ಲಕ್ಷದ್ವೀಪದ ವ್ಯವಹಾರ ಸಂಪೂರ್ಣವಾಗಿ ಇಲ್ಲಿಗೆ ಬರುವಂತೆ ಸಾಧ್ಯವಾದ ಎಲ್ಲಾ ಪ್ರಯತ್ನಿಗಳನ್ನೂ ಮಾಡುವುದಾಗಿ ತಿಳಿಸಿದರು.

ಹಳೆಬಂದರು ಹೂಳೆತ್ತುವ ಕಾಮಗಾರಿಗೆ 29 ಕೋಟಿ ಮಂಜೂರಾಗಿದ್ದು ಈ ಪೈಕಿ ಕೇಂದ್ರ ಸರ್ಕಾರ 15 ಕೋಟಿ ನೀಡಲಿದ್ದು ಉಳಿಕೆ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಲಿದೆ. ಈಗ ಬಂದರಿನ ಆಳ ಕೇವಲ 4 ಮೀಟರ್ ಮಾತ್ರ ಇದ್ದು ಇದನ್ನು 7 ಮೀಟರ್ ಗೆ ಹೆಚ್ಚಿಸ ಬೇಕಾಗಿದೆ. ಹೀಗೆ ಮಾಡುವುದರಿಂದ ಬೃಹತ್ ಹಡಗುಗಳು ಬರಲು ಸಾಧ್ಯವಾಗುತ್ತದೆ ಎಂದರು.

ಮಂಗಳೂರು ಹಳೇ ಬಂದರಿನಲ್ಲಿ ಮೀನುಗಾರ ಮಹಿಳೆಯರಿಗೆ ಶೆಡ್ ನಿರ್ಮಿಸಲು ರಾಜ್ಯ ಸರ್ಕಾರ 47 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದ್ದು ಆದಷ್ಟು ಶೀಘ್ರದಲ್ಲಿ ಕಾಮಗಾರಿಯನ್ನು ಮಾಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ನುಡಿದರು.

ನಾಡದೋಣಿಗಳಿಗೆ ಸರಿಯಾದ ತಂಗುದಾಣ ಇಲ್ಲದಿರುವುದನ್ನು ಮನಗಂಡು ರಾಜ್ಯ ಸರ್ಕಾರ 2.82 ಕೋಟಿ ಮಂಜೂರು ಮಾಡಿದೆ ಎಂದ ಅವರು ಸುಲ್ತಾನ್ ಬತ್ತೇರಿ ಅಭಿವೃದ್ಧಿಗೆ 4.5 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದರು.

ಮೀನುಗಾರಿಕೆ ಬಂದರು ಅಭಿವೃದ್ಧಿಯ 3ನೇ ಹಂತದ ಕಾಮಗಾರಿಗೆ 57.60 ಕೋಟಿ ಮಂಜೂರು ಮಾಡಿದ್ದು ಈ ಪೈಕಿ ಕೇಂದ್ರ ಸರ್ಕಾರ 37.60 ಕೋಟಿ ರೂಪಾಯಿಯನ್ನು ಒದಗಿಸಲಿದೆ ಮತ್ತು ಉಳಿಕೆ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಈ ಮೊದಲು ಕೇಂದ್ರ ಸರ್ಕಾರ 60% ಮತ್ತು ರಾಜ್ಯ ಸರ್ಕಾರ 40% ಹಣ ನೀಡುತ್ತಿತ್ತು. ಈ ಮೊತ್ತವನ್ನೇ ಮುಂದುವರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬೆಂಗ್ರೆ ಮಹಾಜನ ಸಭಾದ ಅಧ್ಯಕ್ಷ ಮೋಹನ್ ಬೆಂಗ್ರೆ, ಮಾಜಿ ಅಧ್ಯಕ್ಷ ಚೇತನ್ ಬೆಂಗ್ರೆ, ಅಸ್ಲಾಂ ಮತ್ತು ಶೇಖರ ಸುವರ್ಣ ಉಪಸ್ಥಿತರಿದ್ದರು.