500 ಕೋಟಿ ವೆಚ್ಚದಲ್ಲಿ ಮಂಗಳೂರು ನಗರದ ಸಮಗ್ರ ಅಭಿವೃದ್ಧಿ : ಶಾಸಕ ಜೆ.ಆರ್.ಲೋಬೊ
ಮಂಗಳೂರು, ಜನವರಿ,೨ : ಮಂಗಳೂರು ಮಹಾನಗರ ಪಾಲಿಕೆಯ ೨೪ನೇ ದೇರಬೈಲ್ ದಕ್ಷಿಣ ವಾರ್ಡ್ನ ಬಿಜೈ ಕಾಪಿಕಾಡ್ ಸಮೀಪದ ಕೊಟ್ಟಾರ ಕ್ರಾಸ್ನಿಂದ ದಡ್ಡಲ್ಕಾಡ್ ವರೆಗೆ (ಕೊಟ್ಟಾರದ ಇನ್ಫೋಸಿಸ್ನ್ನು ಸಂಪರ್ಕಿಸುವ ರಸ್ತೆ) ಕಾಂಕ್ರಿಟಿಕರಣಗೊಂಡ ನೂತನ ರಸ್ತೆಯ ಉದ್ಘಾಟನೆ ಹಾಗೂ 24ನೇ ದೇರಬೈಲ್ ದಕ್ಷಿಣ ವಾರ್ಡ್ನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ಬಾನುವಾರ ಸಂಜೆ ದಡ್ಡಲ್ಕಾಡ್ನಲ್ಲಿ ಜರಗಿತು.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮುಖ್ಯಮಂತ್ರಿಗಳ 2ನೇ ಹಂತದ ವಿಶೇಷ ಅನುದಾನ 100 ಕೋಟಿ ರೂಪಾಯಿಯಲ್ಲಿ ಸುಮಾರು 1.5 ಕೋಟಿ ವೆಚ್ಚದಲ್ಲಿ ಕೊಟ್ಟಾರ ಕ್ರಾಸ್ನಿಂದ ದಡ್ಡಲ್ಕಾಡ್ ವರೆಗೆ ಕಾಂಕ್ರಿಟಿಕರಣಗೊಂಡ ನೂತನ ರಸ್ತೆಯನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಅವರು 99.75 ಅಂದಾಜು ಮೊತ್ತದ ಮನಪಾ ವ್ಯಾಪ್ತಿಯ ಕೊಟ್ಟಾರ ಇನ್ಫೋಸಿಸ್ ಹಿಂಬದಿಯ 3ನೇ ಆಡ್ಡ ರಸ್ತೆಯ ಕಾಂಕ್ರಿಟೀಕರಣಕ್ಕೆ ಹಾಗೂ ರೂ.15 ಲಕ್ಷ ಮೊತ್ತದ ಕೋಟೆಕಣಿ ಮುಖ್ಯ ರಸ್ತೆಯ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಆರ್.ಲೋಬೊ ಅವರು, ಮಂಗಳೂರಿನ ಮೂಲಭೂತ ಸೌಕರ್ಯಗಳ ಜೊತೆಗೆ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸುಮಾರು ರೂ. 2ಸಾವಿರ ಕೋಟಿಯ ಅನುದಾನ ಅನುಷ್ಠಾನವಾಗುವಲ್ಲಿ ಯೋಜನೆಗಳನ್ನು ಮಾಡಲಾಗಿದೆ. ಮೂರು ವರ್ಷಗಳಲ್ಲಿ ಸುಮಾರು 500 ಕೋಟಿ ವೆಚ್ಚದಲ್ಲಿ ಮಂಗಳೂರು ನಗರದ ರಸ್ತೆ ಅಗಲೀಕರಣ, ರಸ್ತೆ ಅಭಿವೃದ್ಧಿ, ಒಳಚರಂಡಿ, ಫುಟ್ಪಾತ್ ನಿರ್ಮಾಣ ಮುಂತಾದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರ ಅಭಿವೃದ್ಧಿಯಾಗಬೇಕಾದರೆ ಮೊದಲು ರಸ್ತೆಗಳ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಮಂಗಳೂರಲ್ಲಿ ಸಾಧ್ಯವಾದಷ್ಟು ರಸ್ತೆಗಳನ್ನು ಅಭಿವೃದ್ಧಿಮಾಡಲಾಗುತ್ತಿದೆ ಎಂದರು.ಮುಖ್ಯ ರಸ್ತೆಗಳಿಗೆ ಪರ್ಯಾಯವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಮುಂದಿನ ಮೂರು ವರ್ಷಗಳಲ್ಲಿ ಮಂಗಳೂರಲ್ಲಿ ಬಹುತೇಕ ಎಲ್ಲಾ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸಿ ನಗರದ ಮಾರುಕಟ್ಟೆಗಳನ್ನು ಕೂಡಾ ಇದೇ ರೀತಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಮಂಗಳೂರಿನ ಜನತೆ ಮನಪಾಕ್ಕೆ ಸಂಬಂಧಪಟ್ಟ ತೆರಿಗೆಗಳನ್ನು ಕ್ಲಪ್ತ ಸಮಯದಲ್ಲಿ ಪಾವಾತಿಸುವ ಮೂಲಕ ಉತ್ತಮ ಸಹಕಾರ ನೀಡುತ್ತಿದ್ದಾರೆ. ಜನರ ಪೂರ್ತಿ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳ ಮೂಲಕ ಮಂಗಳೂರು ನಗರವನ್ನು ಮಾದರಿ ನಗರ ಪಾಲಿಕೆಯನ್ನಾಗಿ ಮಾಡುವುದಾಗಿ ಲೋಬೋ ಹೇಳಿದರು.
24ನೇ ದೇರಬೈಲ್ ದಕ್ಷಿಣ ವಾರ್ಡ್ನ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಸ್ಥಳೀಯ ಮನಪಾ ಸದಸ್ಯ ರಜನೀಶ್ ಕಾಪಿಕಾಡ್ ಅವರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಶಾಸಕರು ರಜನೀಶ್ ಅವರ ಗ್ರೀನ್ ವಾರ್ಡ್ ಕಲ್ಪನೆಗೆ ಶಾಸಕರ ನೆಲೆಯಿಂದ ಬೆಂಬಲ ನೀಡುವುದಾಗಿ ತಿಳಿಸಿದರು.
ಗೌರವ ಸಮ್ಮಾನ:
24ನೇ ದೇರಬೈಲ್ ದಕ್ಷಿಣ ವಾರ್ಡ್ನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅಗುವ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಸ್ಪಂದಿಸಿ ವಾರ್ಡ್ನ ಸಮಗ್ರ ಅಭಿವೃದ್ಧಿಗೆ ಸಹಕರಿಸಿದ ಶಾಸಕ ಜೆ.ಆರ್.ಲೋಬೊ, ಮೂಡ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಮೇಯರ್ ಹರಿನಾಥ್, ಸ್ಥಳೀಯ ಕಾರ್ಪೊರೇಟರ್ ರಜನೀಶ್ ಕಾಪಿಕಾಡ್ ಹಾಗೂ ಪಿ.ಡಬ್ಲ್ಯು ಡಿಯ ಕ್ಲಾಸ್ 1 ಗುತ್ತಿಗೆದಾರ ಎಂ.ಜಿ.ಹುಸೈನ್ ಅವರನ್ನು ದಡ್ಡಲ್ಕಾಡ್ ಫ್ರೆಂಡ್ ಸರ್ಕಲ್ ವತಿಯಿಂದ ಅಭಿನಂದಿಸಲಾಯಿತು.
ಮಂಗಳೂರು ಮೇಯರ್ ಹರಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮೂಡ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸ್ಲಾಟ್ ಪಿಂಟೋ, ಮನಪಾ ಸದಸ್ಯರಾದ ಪ್ರಕಾಶ್ ಸಾಲ್ಯಾನ್, ಪ್ರತಿಭಾ ಕುಳಾಯಿ, ರಾಧಕೃಷ್ಣ, ಪಿ.ಡಬ್ಲ್ಯು ಡಿಯ ಕ್ಲಾಸ್ ಒನ್ ಗುತ್ತಿಗೆದಾರ ಎಂ.ಜಿ.ಹುಸೈನ್, ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್ ಗಳಾದ ಲಕ್ಷ್ಮಣ್ ಪೂಜಾರಿ, ಶ್ರೀಮತಿ ಪಾರ್ವತಿ, ದಡ್ಡಲ್ಕಾಡ್ ಫ್ರೆಂಡ್ ಸರ್ಕಲ್ನ ಪದಾಧಿಕಾರಿಗಳಾದ ಪ್ರವೀಣ್ ದಡ್ಡಲ್ಕಾಡ್, ರಜನೀಶ್ ದಡ್ಡಲ್ಕಾಡ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಕಾರ್ಪೊರೇಟರ್ ರಜನೀಶ್ ಕಾಪಿಕಾಡ್ ಸ್ವಾಗತಿಸಿದರು. ರಾಜೇಂದ್ರ ಆದರ್ಶನಗರ ಕಾರ್ಯಕ್ರಮ ನಿರೂಪಿಸಿದರು. ಶಶಿರಾಜ್ ದಡ್ಡಲ್ಕಾಡ್ ವಂದಿಸಿದರು.