ಮಂಗಳೂರು: ಮರಳು ಸಾಗಾಟದ ಬಗ್ಗೆ ನಾಳೆ (ಶನಿವಾರ) ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುವುದಾಗಿ ಶಾಸಕ ಜೆ.ಆರ್.ಲೋಬೊ ಭರವಸೆ ನೀಡಿದರಲ್ಲದೆ ಎಲ್ಲರೂ ಕುಳಿತು ಚರ್ಚಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು.
ಶಾಸಕ ಜೆ.ಆರ್.ಲೋಬೊ ಅವರನ್ನು ಇಂದು ಭೇಟಿ ಮಾಡಿದ ಕ್ರೆಡೈಲ್ ಪದಾಧಿಕಾರಿಗಳ ಜೊತೆ ವಿವರ ಪಡೆದ ನಂತರ ಮಾತನಾಡಿದರು.
ಮರಳು ಸಾಗಾಟದ ಸಮಸ್ಯೆಯ ಬಗ್ಗೆ ತಮಗೆ ಅರಿವಿದ್ದು ಈ ಸಮಸ್ಯಗಳನ್ನು ಬಗೆ ಹರಿಸಬೇಕಾದರೆ ಎಲ್ಲರೂ ಒಗ್ಗೂಡಬೇಕು. ಪರಸ್ಪರ ವಿವರವಾಗಿ ಚರ್ಚಿಸಿಯೇ ಪರಿಹಾರ ಹುಡುಕಬೇಕು ಎಂದು ಸಲಹೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಸಾಗಾಟವಿಲ್ಲದೆ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿರುವುದಾಗಿ ಸದಸ್ಯರು ವಿವರ ಕೊಟ್ಟರು. ಆಗಾಗ ಅಧಿಕಾರಿಗಳು ಸಮಸ್ಯೆ ನೀಡುತ್ತಿದಾರೆ. ಅವರ ಉಪಟಳವನ್ನು ಸಹಿಸಿಕೊಂಡು ಇರುವುದಾಗಿ ಹೇಳಿದರು. ಮೀನುಗಾರಿಕೆಯ ಸಂತಾನಾಭಿವೃದ್ಧಿಯ ಅವಧಿ ಮುಗಿದರೂ ಮರಳು ಸಾಗಾಟ ಮಾಡಲು ಅಧಿಕಾರಿಗಳು ಪರವಾನಗಿ ಕೊಟ್ಟಿಲ್ಲವೆಂದು ದೂರಿದರು.
ಈ ಎಲ್ಲಾ ಸಮಸ್ಯೆಯ ಬಗ್ಗೆ ತಾವು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ ನಂತರವೇ ಪರಿಹಾರ ಕೊಡುವುದಾಗಿ ಶಾಸಕ ಜೆ.ಆರ್.ಲೋಬೊ ಭರವಸೆ ಕೊಟ್ಟರು. ತಾವು ಅಧಿಕಾರಿಗಳಿಗೆ ಸಾಧ್ಯವಾದ ತಾಳ್ಮೆ ಕೊಟ್ಟು ನೆರವಾಗುವುದಾಗಿ ಪದಾಧಿಕಾರಿಗಳು ಭರವಸೆ ನೀಡಿದರು.