ಮಂಗಳೂರು: ಗ್ರಾಮೀಣ ಭಾಗಗಳ ರಸ್ತೆ ಅಭಿವೃದ್ಧಿ ಸಹಿತ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತುನೀಡುವ ಇರಾದೆಯಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಕಂಕನಾಡಿ ಬಿ ವಾರ್ಡ್ ನ ಎಕ್ಕೂರು ತೋಚಿಲ ಮುಖ್ಯ ರಸ್ಯೆ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಎಕ್ಸಟೆಷನ್ ವಾರ್ಡ್ ಗಳ ಆಭಿವೃದ್ಧಿಗೆ ಗಮನ ಹರಿಸಬೇಕಾಗಿದೆ. ಈ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಈ ನಿಟ್ಟಿನಲ್ಲಿ ತಾವು ಹೆಚ್ಚು ಒತ್ತು ನೀಡುತ್ತಿರುವುದಾಗಿ ಹೇಳಿದರು.
ನೇತ್ರಾವತಿ ಬ್ರಿಜ್ ನಿಂದ ಕಣ್ಣೂರಿಗೆ ರಸ್ತೆ ಮಾಡಬೇಕು ಎನ್ನುವುದು ನನ್ನ ಕನಸು. ಇದಕ್ಕಾಗಿ ಈಗಾಗಲೇ ಲೋಕೋಪಯೋಗಿ ಖಾತೆ ಸಚಿವ ಮಹಾದೇವಪ್ಪ ಅವರೊಂದಿಗೆ ಮಾತನಾಡಿದ್ದು ಈ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ 25 ಲಕ್ಷ ರೂಪಾಯಿ ಅನುದಾನವನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಈ ಹಣದಿಂದ ಈ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಅಂದಾಜನ್ನು ಸಿದ್ಧಪಡಿಸುವಂತೆಯೂ ಹೇಳಿದ್ದಾರೆ ಎಂದರು.
ಈ ರಸ್ತೆ ನಿರ್ಮಾಣವಾದರೆ ಹೆದ್ದಾರಿಗೆ ಪ್ಯಾರಲಲ್ ರಸ್ತೆಯಾಗಿ ರೂಪುಗೊಳ್ಳಲಿದ್ದು ವಾಹನಗಳ ಸಾಗಾಟಕ್ಕೂ ಕೂಡಾ ಇದರಿಂದಾಗಿ ಉಪಯೋಗವಾಗಲಿದೆ ಎಂದ ಅವರು ಇದು ಪೂರ್ಣಗೊಂಡರೆ ಇದರಲ್ಲಿ ಸೈಕಲ್ ಟ್ರ್ಯಾಕ್ ಕೂಡಾ ಮಾಡಲಾಗುವುದು ಎಂದರು.
ನಗರ ಪಾಲಿಕೆಯಲ್ಲಿರುವ ಕೆರೆಗಳ ಅಭಿವೃದ್ಧಿ, ಪಾರ್ಕ್ ಗಳ ಅಭಿವೃದ್ಧಿ ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಾವು ಆಸಕ್ತಿ ಹೊಂದಿದ್ದು ಈ ಎಲ್ಲಾ ಕೆಲಸಗಳನ್ನು ಮಾಡುವುದಕ್ಕೆ ಜನರ ಸಹಕಾರ ಅಗತ್ಯವೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಕಾಶ್ ಭಟ್, ಪದ್ಮನಾಭ್ ರೈ, ಕೇಶವ ಅಂಗಡಿಮಾರ್, ಪ್ರಭಾಕರ್ ಶ್ರೀಯಾನ್, ರಾಮಚಂದ್ರ ಆಳ್ವ, ಸೇಸಮ್ಮ, ಶಶಿಧರ್, ಎನ್.ಜೆ.ನಾಗೇಶ್, ಶಾಸ್ತ್ರಿ, ಕೃತಿನ್ ಕುಮಾರ್, ಮನೋಜ್ ಕುಮಾರ್ ಮುಂತಾದವರಿದ್ದರು.