ಮಂಗಳೂರು: ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಉರ್ವಾ ಮಾರುಕಟ್ಟೆಯನ್ನು ನಿರ್ಮಿಸಲು ಉದ್ದೇಶಿಸಿದ್ದು ಈಗ ಇರುವ ಮಾರುಕಟ್ಟೆಯನ್ನು ತಾತ್ಕಾಲಿಕ ಸ್ಥಳಕ್ಕೆ ಜನವರಿ 14 ರಂದು ವರ್ಗಾಯಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಉರ್ವಾದಲ್ಲಿ ತಾತ್ಕಾಲಿಕ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಡಿಸೆಂಬರ್ ತಿಂಗಳ ಒಳಗೆ ನೂತನ ಮಾರುಕಟ್ಟೆಯನ್ನು ಪೂರ್ಣಗೊಳಿಸಲಾಗುವುದು. ಈಗಿಂದಲೇ ಕಾಮಗಾರಿ ಆರಂಭವಾಗಬೇಕಿರುವುದರಿಂದ ತಾತ್ಕಾಲಿಕ ಮಾರುಕಟ್ಟೆ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ವಿನಂತಿಸಿದರು.

ಸಾರ್ವಜನಿಕರಿಗೆ ಸುಸಜ್ಜಿತ ಮಾರುಕಟ್ಟೆಯನ್ನು ನಿರ್ಮಿಸಿಕೊಡುವುದು ಮೂಲ ಉದ್ದೇಶ. ಇಲ್ಲಿರುವ ಅಂಗಡಿ ಮಾಲಿಕರು ಮಾರುಕಟ್ಟೆ ನಿರ್ಮಾಣಕ್ಕೆ ಸಹಕಾರ ಕೊಡಬೇಕು. ನಿಮಗೆ ಉತ್ತಮ ರೀತಿಯಲ್ಲಿ ಮಾರುಕಟ್ಟೆ ನಿರ್ಮಿಸಿಕೊಡಲು ಬದ್ಧರಾಗಿದ್ದೇವೆ ಎಂದು ನುಡಿದ ಶಾಸಕ ಜೆ.ಆರ್.ಲೋಬೊ ಅವರು ಹೊಸ ಮಾರುಕಟ್ಟೆ ನಿರ್ಮಾಣವಾಗುವ ತನಕ ತಾತ್ಕಾಲಿಕ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್, ಕಮಿಷನರ್ ಶ್ರೀಕಾಂತ್, ಕಾರ್ಪೊರೇಟರ್ ರಾಧಾಕೃಷ್ಣ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಗುತ್ತಿಗೆದಾರ ಆಸೀಫ್ ಉಪಸ್ಥಿತರಿದ್ದರು.