ಮಂಗಳೂರು: ಮಂಗಳೂರು ವಿಧಾನ ಸಭಾ ವ್ಯಾಪ್ತಿಯಲ್ಲಿ 94 ಸಿಸಿ ಪ್ರಕಾರ ಹಕ್ಕುಪತ್ರ ಪಡೆಯಲು ಅರ್ಹರಾಗಿರುವವರನ್ನು ಸ್ಥಳ ತನಿಖೆ ಮಾಡಿ ಎಪ್ರಿಲ್ ಅಥವಾ ಮೇ ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಸೂಚಿಸಿದರು.
ಅವರು 94 ಸಿಸಿ ಬಗ್ಗೆ ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಹಕ್ಕು ಪತ್ರಪಡೆಯಲು ಅರ್ಹರಾಗಿರುವವರ ಅಂಕಿ ಅಂಶ ಪಡೆದು ಮಾತನಾಡುತ್ತಿದ್ದರು.
ಮುಖ್ಯಮಂತ್ರಿಯರು ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಾರೆ. ಅದೇ ವೇಳೆಗೆ ಹಕ್ಕು ಪತ್ರವಿತರಿಸಲು ಅವಕಾಶವಾಗಬೇಕು. ಯಾವುದೇ ಕಾರಣಗಳಿಗೂ ವಿಳಂಭವಾಗುವುದು ಸರಿಯಲ್ಲ. ಮುಖ್ಯಮಂತ್ರಿಯವರು ಪದೇ ಪದೇ ಬರುವುದಿಲ್ಲ. ಬಂದ ವೇಳೆ ನಾವು ಹಕ್ಕು ಪತ್ರವನ್ನು ಅವರಿಂದಲೇ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಗ್ರಾಮ ಲೆಕ್ಕಿಗರಿಗೆ ಇಂತಿಷ್ಟೇ ಸಂಖ್ಯೆಯನ್ನು ನಿಗಧಿಪಡಿಸಿ. ನೀವು ಹೇಳಿದ ಅವಧಿಯೊಳಗೆ ಅವರಿಂದ ಮಾಹಿತಿ ಕಲೆ ಹಾಕಿ ಎಂದು ಹೇಳಿದ ಶಾಸಕ ಜೆ.ಆರ್.ಲೋಬೊ ಗ್ರಾಮ ಲೆಕ್ಕಿಗರು ಕಡಿಮೆ ಇದ್ದಾರೆ ಎನ್ನುವುದು ಉತ್ತರವಾಗಲಾರದು. ಇದನ್ನು ಪ್ರಾಮುಖ್ಯ ಕೆಲಸ ಎಂದು ತಿಳಿಯುವಂತೆ ಹೇಳಿದರು.
ಎಲ್ಲಾ ಅಧಿಕಾರಿಗಳು ಒಂದು ವಾರ ಸರಿಯಾಗಿ ಕೆಲಸ ಮಾಡಿದರೆ ಮುಗಿಯುತ್ತದೆ. ಯಾರು ಹಕ್ಕು ಪತ್ರಕ್ಕಾಗಿ ಅರ್ಜಿ ಕೊಟ್ಟಿದ್ದಾರೆ. ಅವರ ಅರ್ಜಿಯನ್ನು ಪರಿಶೀಲಿಸಿ ಸರ್ಕಾರ ನಿಗಧಿ ಮಾಡಿದ ರೀತಿಯಲ್ಲಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಂಡು ಕೆಲಸ ಮಾಡಿ ಎಂದರು..