ಮಂಗಳೂರುಃ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಬ್ಬರದ ಭಾಷಣ ಮತ್ತು ಪ್ರಚಾರ ನಡೆದಿದೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ.
ಏಪ್ಪತ್ತು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ದೇಶವನ್ನು ಸುಭದ್ರವಾಗಿ ಕಟ್ಟಿದ್ದೆ ಕಾಂಗ್ರೆಸ್ ಎಂದು ಮಂಗಳೂರಿನ ಮಾಜಿ ಮೇಯರ್ ಮಹಾಬಲ ಮಾರ್ಲ ಹೇಳಿದ್ದಾರೆ.
ಬಣ್ಣದ ಮಾತುಗಳಿಂದ, ಭಾವನಾತ್ಮಕ ಭಾಷಣಗಳಿಂದ ಜನರನ್ನು ಸಮ್ಮೋಹಿನಿಗೊಳಪಡಿಸಿದ ಚುನಾವಣೆಯಲ್ಲಿ ಗೆದ್ದ ಮೇಲೆ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸದ ಕಾಲಹರಣ ಮಾಡಿದ್ದೆ, ಬಿಜೆಪಿ ಸಂಸದರ ಮತ್ತವರ ಸರಕಾರದ ಬಹುದೊಡ್ಡ ಸಾಧನೆ ಎಂದು ಮಹಾಬಲ ಮಾರ್ಲ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೊದಲಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಂದಿನ ಕಾಲದಲ್ಲಿ ಅಸ್ಪ್ರಶ್ಯತೆ ಮತ್ತು ಅಸಮಾನತೆ ಭಾರತದ ಬಹುದೊಡ್ಡ ಸಮಸ್ಯೆಯಾಗಿತ್ತು. ಕ್ರೂರ ಪದ್ದತಿಗಳು ಸಂಪ್ರದಾಯಗಳು ಅಸ್ಪ್ರಶ್ಯತೆಯ ಹೆಸರಲ್ಲಿ ನಡೆಯುತ್ತಿದ್ದಾಗ ಇಂದಿರಾಗಾಂಧಿಯವರು ಅಸ್ಪ್ರಶ್ಯತಾ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದದ್ದು. ಅಂತಹ ಕಾಯ್ದೆ ಆಗ ಜಾರಿಗೆ ಬರದಿದ್ದರೆ ವರ್ಗ ಸಂಘರ್ಷ ಮತ್ತು ರಕ್ತ ಕ್ರಾಂತಿಗೆ ಕಾರಣವಾಗುತ್ತಿತ್ತು. ಇದರಿಂದಾಗಿ ಮತಾಂತರವನ್ನು ಕೂಡಾ ತಡೆಯಲು ಸಾಧ್ಯವಾಯಿತು ಎಂದಿದ್ದಾರೆ.
ಭೂ ಮಸೂದೆ ಕಾಯ್ದೆ ಜಾರಿಗೆ ತರುವ ಮೂಲಕ ಕೋಟ್ಯಾಂತರ ಮಂದಿ ಭೂಮಾಲೀಕರಾದರು. ಇಂದಿನ ಯುವ ಪೀಳಿಗೆ ತಮಗೆ ಇರುವ ಸ್ವಂತ ಭೂಮಿಯ ಒಡೆತನ ಹೇಗೆ ಬಂತು ಎಂದು ಮನೆಯ ಹಿರಿಯರ ಬಳಿ ಕೇಳಿದರೆ ಸಾಕು. ಅವರೇ ಹೇಳುತ್ತಾರೆ. ಸಾವಿರಾರು ಎಕರೆ ಹೊಂದಿದ್ದ ಭೂ ಮಾಲಿಕರ ಮನೆಯಲ್ಲಿ ತಾವು ಜೀತದಾಳುಗಳಾಗಿದ್ದ, ಗುಲಾಮರಂತೆ ಬದುಕುತ್ತಿದ್ದ ನೋವಿನ ಕಥೆಗಳನ್ನು. ಇವರ ಮಂಕುಬೂದಿ ಭಾಷಣಗಳಿಂದ ಜನರು ವಾಸ್ತಮ ಮರೆಯಬಾರದು ಎಂದು ಮಹಾಬಲ ಮಾರ್ಲ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ಸ್ವಾತಂತ್ರ್ಯ ದೊರೆಯುವ ದಿನಗಳಲ್ಲಿ ಕೇವಲ ಬೆರಳೆಣಿಕೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿತ್ತು. ಬ್ರಿಟಿಷರು ತಮಗಾಗಿ ಆರಂಭಿಸಿದ ರೈಲ್ವೇ ನಿಲ್ದಾಣವನ್ನು ಹೊರತುಪಡಿಸಿ ಬೇರೆ ಯಾವುದೇ ಯಾವುದೇ ವ್ಯವಸ್ಥೆಗಳನ್ನು ಮತ್ತು ಆರ್ಥಿಕ ಸಂಪನ್ಮೂಲವನ್ನು ಹೊಂದಿರಲಿಲ್ಲ. ಉಳ್ಳಾಲ ಶ್ರೀನಿವಾಸ ಮಲ್ಯರ ದೂರದೃಷ್ಟಿಯತ್ವ, ಜನಾರ್ಜದನ ಪೂಜಾರಿ ಅವರ ಕಾರ್ಯನಿಷ್ಠೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ನಿರಂತರ ಪರಿಶ್ರಮದಿಂದ ಅಭಿವೃದ್ಧಿಯ ಪಥದಲ್ಲಿ ಸಾಗಿತು. ಅದರ ಪರಿಣಾಮವಾಗಿ ಜಗತ್ತಿನಲ್ಲೇ ಗುರುತಿಸಲಾದ ಜಿಲ್ಲೆಯಾಗಿದೆ. ವಿಷಾದನೀಯವೆಂದರೆ ಕಳೆದ ಮೂವತ್ತು ವರ್ಷಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದವರು ಹೇಳಿದರು.
ಸ್ವಾತಂತ್ರ್ಯ ಬಂದ ತಕ್ಷಣ ರಾತ್ರಿ ಬೆಳಗಾಗುವುದರಲ್ಲಿ ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಸಭೆ, ಮಹಾನಗರ ಪಾಲಿಕೆ ಇತ್ಯಾದಿ ಸ್ಥಳೀಯ ಸಂಸ್ಥೆಗಳು ಬಂದಿರಲಿಲ್ಲ. ಆಗಿನ ಕಾಂಗ್ರೆಸ್, ಜನತಾಪಕ್ಷ, ಕಮ್ಯೂನಿಷ್ಟರು ಸೇರಿದಂತೆ ಅನೇಕ ಪಕ್ಷಗಳ ಧುರೀಣರ ಚಿಂತನೆಯ ಫಲವಾಗಿ ರಾಜೀವಗಾಂಧಿಯವರ ಆಸಕ್ತಿಯಿಂದಾಗಿ ಇವುಗಳು ಹಂತ ಹಂತವಾಗಿ ಬೆಳೆದು ಭಾರತದ ಆಡಳಿತ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡುವ ಮೂಲಕ ಪ್ರಾದೇಶಿಕ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಕರಾವಳಿಗೆ ಸಂಬಂಧಿಸಿದಂತೆ ಕೆಲವೇ ಕೆಲವರ ಕೈಯಲ್ಲಿದ್ದ ಭೂಮಿ ಒಡೆತನ ಇಲ್ಲಿನ ಹಿಂದುಳಿದ ಮತ್ತು ದಲಿತರಿಗೂ ದೊರೆಯಿತು. ಇದರಿಂದಾಗಿ ಸಾಮಾಜಿಕ ಬದಲಾವಣೆ ಸಾಧ್ಯವಾಯಿತು. ಇಲ್ಲಿನ ಬಹುಸಂಖ್ಯಾತ ಹಿಂದುಳಿದವರು ಸಾಮಾಜಿಕವಾಗಿಯು, ಆರ್ಥಿಕವಾಗಿಯು ಪ್ರಗತಿ ಕಾಣಲು ಸಾಧ್ಯವಾಯಿತು. ಅಂದಿನ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಅಸಂಖ್ಯ ಸೇತುವೆಗಳು, ಹೆದ್ದಾರಿ, ನವಮಂಗಳೂರು ಬಂದರು, ವಿಮಾನ ನಿಲ್ದಾಣ ಅಭಿವೃದ್ಧಿಯಾಗಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಯಿತು. ಇತ್ತೀಚಿಗಿನ ದಶಕಗಳಲ್ಲಿ ಕರಾವಳಿಯ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಒಂದು ಹೊಸ ಸೇತುವೆ, ಒಂದು ಫ್ಲೈಓವರ್ ನಿರ್ಮಿಸಲು ಅಸಾಧ್ಯವಾಗುತ್ತಿದೆ ಎಂದವರು ಹೇಳಿದ್ದಾರೆ.
ಮಹಾಬಲ ಮಾರ್ಲ ಮಾಜಿ ಮೇಯರ್, ಮಂಗಳೂರು ಮಹಾನಗರಪಾಲಿಕೆ