ಮಂಗಳೂರು: ವಸತಿ ರಹಿತರಿಗೆ ವಸತಿ ಕೊಡುವ ಉದ್ದೇಶದಿಂದ ಆಶ್ರಯ ಯೋಜನೆಯಲ್ಲಿ 10 ಎಕ್ರೆ ಪ್ರದೇಶದಲ್ಲಿ 1100 ಮನೆಗಳನ್ನು ನಿರ್ಮಿಸುವ ಬಹುಮಹಡಿ ಕಟ್ಟಡ ಯೋಜನೆಯನ್ನು ಶಕ್ತಿನಗರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ಶಾಸಕ ಜೆ.ಆರ್.ಲೋಬೊ ಜಾರಿಗೆ ತರುತ್ತಿದ್ದಾರೆ. ಶಕ್ತಿನಗರದಲ್ಲಿ ಇಂದು ಈ ಬಹುಮಹಡಿ ಮನೆಯನ್ನು ಪಡೆಯಲಿರುವ ಫಲಾನುಭವಿಗಳನ್ನುದ್ದೇಶಿಸಿ ಶಾಸಕ ಜೆ.ಆರ್.ಲೋಬೊ ಅವರು ಮಾತನಾಡುತ್ತಿದ್ದರು.
ದಿವಂಗತ ಇಂದಿರಾ ಗಾಂಧಿ ಅವರ ಜನ್ಮಶತಮಾನೋತ್ಸವದ ನೆನಪಿನಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಮಂಗಳೂರು ನಗರಪಾಲಿಕೆ ಈ ಯೋಜನೆಯನ್ನು ಜಾರಿಗೆ ತರುತ್ತಿವೆ. ಪರಿಶಿಷ್ಟ ಜಾತಿಯವರು 3.70 ಲಕ್ಷ ರೂಪಾಯಿ ಅನುದಾನ ಮತ್ತು ಇತರ ಜಾತಿಯವರು 3.40 ಲಕ್ಷ ರೂಪಾಯಿ ಅನುದಾನವನ್ನು ಪಡೆಯಲಿದ್ದಾರೆ ಎಂದರು.
5 ಲಕ್ಷ ರೂಪಾಯಿ ಬೆಲೆಯ ಮನೆಗಳನ್ನು ಫಲಾನುಭವಿಗಳು ಪಡೆಯಲಿದ್ದು ಪರಿಶಿಷ್ಟರಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂಪಾಯಿಯನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ನೀಡಿದರೆ ರಾಜ್ಯ ಸರ್ಕಾರ 1.80 ಲಕ್ಷ ರೂಪಾಯಿಯನ್ನು ಮಹಾನಗರ ಪಾಲಿಕೆ ಪರಿಶಿಷ್ಟರಿಗೆ 1 ಲಕ್ಷ ರೂಪಾಯಿ ನೀಡಲಿದೆ. ಇತರ ಜಾತಿಯವರಿಗೆ ನಗರ ಪಾಲಿಕೆ 70 ಸಾವಿರ, ರಾಜ್ಯ ಸರ್ಕಾರ 1.2 ಲಕ್ಷ ರೂಪಾಯಿ ಹಾಗೂ ಕೇಂದ್ರ ಸರ್ಕಾರ 1.5 ಲಕ್ಷ ರೂಪಾಯಿ ನೀಡಲಿದೆ ಎಂದು ವಿವರಿಸಿದರು.
ರಾಷ್ಟ್ರೀಕೃತ ಬ್ಯಾಂಕ್ ಗಳು ಪರಿಶಿಷ್ಠರಿಗೆ 1.5 ಲಕ್ಷ ರೂಪಾಯಿ, ಇತರ ಜಾತಿಯವರಿಗೆ 1.3 ಲಕ್ಷ ರೂಪಾಯಿ ಸಾಲ ನೀಡಲಿವೆ. ಈ ಹಣವನ್ನು ಪಿಗ್ಮಿ ಆಧಾರದಲ್ಲಿ ಪಾವತಿಸಬಹುದು. ಅಂತೂ ಪರಿಷ್ಟರು ತಮ್ಮ ವೈಯಕ್ತಿಕ ಹಣವಾಗಿ ಕೇವಲ 20 ಸಾವಿರ ರೂಪಾಯಿಯನ್ನು, ಇತರ ಜಾತಿಯವರು 30 ಸಾವಿರ ರೂಪಾಯಿಯನ್ನು ಪಾವತಿಸಿ ಈ ವಸತಿ ನಿಲಯ ಪಡೆಯಬಹುದು ಎಂದರು.
ಈ ಬಹುಮಹಡಿ ಕಟ್ಟಡ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ರಸ್ತೆ, ದಾರಿ ದೀಪ, ಕುಡಿಯುವ ನೀರು, ಆಟದ ಮೈದಾನ, ವಿಹಾರ ಕೇಂದ್ರ, ಬಸ್ ನಿಲ್ದಾಣ, ವಿದ್ಯುತ್ ಸೇವೆಗಳನ್ನು ಒಳಗೊಂಡಿರುತ್ತದೆ. 18 ತಿಂಗಳಲ್ಲಿ ಕಟ್ಟಡ ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸುವ ಗುರಿಹೊಂದಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಇದು ಆರಂಭ ಮಾತ್ರ. ಈ ಸಲ ವಸತಿ ಸಿಗದವರು ಯಾವುದೇ ಕಾರಣಕ್ಕೂ ನಿರಾಶರಾಗುವ ಅಗತ್ಯವಿಲ್ಲ. ಎರಡನೇ ಹಂತದಲ್ಲಿ ಅವರಿಗೂ ವಸತಿ ನೀಡಲಾಗುವುದು. ಇದಕ್ಕಾಗಿ ಭೂಮಿ ಹುಡುಕಲಾಗುತ್ತಿದೆ ಎಂದು ನುಡಿದರು.
ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಇದು ಯಶಸ್ವಿಯಾದರೆ ರಾಜ್ಯದಾದ್ಯಂತ ಈ ಯೋಜನೆ ಜಾರಿಗೆ ಬರುತ್ತದೆ ಎಂದು ಹೇಳಿದ ಅವರು ಈ ಯೋಜನೆಯನ್ನು ತಾವು ವೈಯಕ್ತಿಕ ಆಸಕ್ತಿ ವಹಿಸಿ ನಿವೇಶನ ಹುಡುಕಿ ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ಕಾರ್ಪೊರೇಟರ್ ಗಳ ಸಭೆ ಕರೆದು 3000 ಅರ್ಜಿಗಳ ಪೈಕಿ 1100 ಫಲಾನುಭವಿಗಳನ್ನು ಆಯ್ಕೆಮಾಡಿರುವುದಾಗಿ ತಿಳಿಸಿದರು.
ಬಡವರು ಸ್ವಂತ ಮನೆ ಹೊಂದುವ ಕನಸು ಕನಸಾಗಲಿದೆ. ದಿವಂಗತ ಇಂದಿರಾ ಗಾಂಧಿ ಮಹಿಳಾ ಪ್ರಧಾನಿಯಾಗಿ ಈ ದೇಶವನ್ನು ಆಳಿದರು. ಉಳುವವನೆ ಒಡೆಯ ಎಂದು ಭೂಸುಧಾರಣಾ ಯೋಜನೆಯನ್ನು ಜಾರಿಗೆ ತಂದು, ಬಡವರಿಗೆ ಲಕ್ಷಾಂತರ ಮನೆಗಳನ್ನು ನಿರ್ಮಿಸಿ ಕೊಟ್ಟ ಮಹಿಳೆಯ ಜನ್ಮ ಶತಮಾನೋತ್ಸವ ಕಾಕತಾಳೀಯವಾಗಿ ಬಂದಿರುವುದರಿಂದ ಈ ಯೋಜನೆಯನ್ನು ಇದೇ ಅವಧಿಯಲ್ಲಿ ಒದಗಿಸಬೇಕು ಎಂಬ ಆಶಾವಾದ ಹೊಂದಿರುವುದಾಗಿ ಜೆ.ಆರ್.ಲೋಬೊ ತಿಳಿಸಿದರು.
ಸಮಾರಂಭದಲ್ಲಿ ಕಾರ್ಪೊರೇಟರ್ ಗಳಾದ ಕೆ.ಭಾಸ್ಕರ್ ಮೊಯ್ಲಿ, ಅಖಿಲಾ ಆಳ್ವಾ, ಜುಬೇದಾ, ಮಾಜಿ ಮೇಯರ್ ಅಜೀಜ್, ಮಹಾನಗರ ಪಾಲಿಕೆ ಜಂಟಿ ಆಯುಕ್ತರಾದ ಗೋಕುಲದಾಸ್ ನಾಯಕ್ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.