ದ.ಕ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿಯ ಸಭೆಯು ತಾ.11.03.2018 ರಂದು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು, ಮೀನುಗಾರಿಕೆ ಉದ್ಯಮ ದ.ಕ ಹಾಗೂ ಉಡುಪಿ ಜಿಲ್ಲೆಯ ದೊಡ್ಡ ಉದ್ದಿಮೆಯಾಗಿದೆ. ಸುಮಾರು 50,000 ಜನರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈ ಉದ್ದಿಮೆಯನ್ನು ನೆಚ್ಚಿಕೊಂಡಿರುತ್ತಾರೆ. ಮೀನು ಹಿಡಿಯುವುದು, ಮೀನು ಮಾರುವುದು, ರಫ್ತು, ಸಂಸ್ಕರಣೆ, ಬೋಟುಗಳ ನಿರ್ವಹಣೆ ವ್ಯವಹಾರದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟುಕೊಂಡಿರುತ್ತಾರೆ. ಈ ಉದ್ದಿಮೆ ನಮ್ಮ ಜಿಲ್ಲೆಯ ಅಭಿವೃದ್ಧಿಯ ಬೆನ್ನೆಲುಬು. ಈ ಉದ್ದಿಮೆಗೆ ಸಹಕಾರಿಯಾಗಲಿರುವ 3ನೇ ಹಂತದ ಜಟ್ಟಿ ನಿರ್ಮಾಣಕ್ಕೆ ಸುಮಾರು ರೂ.90 ಕೋಟಿಗಳ ಅಗತ್ಯವಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಇದಕ್ಕೆ ಮಂಜುರಾತಿ ನೀಡಬೇಕು. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ 60:40 ಪ್ರಪಾತದಲ್ಲಿ ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರಕಾರ ಈಗಾಗಲೇ ರೂ.50 ಕೋಟಿ ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಸರಕಾರ ಕೇವಲ ರೂ.13ಕೋಟಿ ಬಿಡುಗಡೆಗೊಳಿಸಿದ್ದಾರೆ. ಹಣ ಬಿಡುಗಡೆ ಮಾಡಲು ಕೇಂದ್ರ ಸರಕಾರ ಮೀನಮೇಷ ಎನಿಸಿಕೊಳ್ಳುತ್ತಿದೆ. ಮೀನುಗಾರಿಕೆ ಉದ್ದಿಮೆಯ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಳ್ಳದೇ ಮಲತಾಯಿ ಧೋರಣೆ ವಹಿಸುತ್ತಿದ್ದಾರೆ. ಕೇಂದ್ರ ಫಿಶರೀಸ್ ಅಭಿವೃದ್ಧಿ ನಿಗಮದಿಂದ ಯಾವುದೇ ಸಹಕಾರ ಈವರೆಗೆ ಸಿಗಲಿಲ್ಲ. ಯಾವುದೇ ಸ್ಥಳೀಯ ಮಾರುಕಟ್ಟೆಗಳಿಗೆ ಆ ನಿಗಮದಿಂದ ಹಣ ಮಂಜುರಾತಿ ಆಗಿರುವುದಿಲ್ಲ. ರಾಜ್ಯ ಸರಕಾರ ಬೋಳೂರು ಸುಲ್ತಾನ್ ಬತ್ತೇರಿಯ ಜಟ್ಟಿ ನಿರ್ಮಾಣಕ್ಕೆ ರೂ.5 ಕೋಟಿ ನೀಡಿದ್ದಾರೆ. ಡ್ರೆಜ್ಜಿಂಗ್ ಕಾರ್ಯ ಮಾಡಲು ರೂ.30 ಕೋಟಿ ಅನುದಾನ ದೊರೆತಿದೆ. ನಾಡದೋಣಿ ತಂಗುದಾಣಕ್ಕೆ ಹಾಗೂ ಒಣಮೀನು ಶೆಡ್ ನಿರ್ಮಾಣಕ್ಕೆ ರೂ. 2.20 ಕೋಟಿ ಅನುದಾನ ನೀಡಿದೆ. ಮುಂದಿನ ದಿನಗಲ್ಲಿ ನಗರದ ಹೊಯಿಗೆ ಬಜಾರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸೀಮೆಎಣ್ಣೆ, ಅನಿಲಕ್ಕೆ ಕೇಂದ್ರ ಸರಕಾರದಿಂದ ಸಬ್ಸಿಡಿಯನ್ನು ತೆಗೆಯಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಸರಕಾರದ ನಡೆ ಜನಸಾಮಾನ್ಯರಿಗೆ ಹಿನ್ನಡೆಯಾಗಿದೆ ಎಂದರು.
ಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿಯ ಅಧ್ಯಕ್ಷ ದೀಪಕ್ ಶ್ರೀಯಾನ್, ರಾಜ್ಯ ಉಪಾಧ್ಯಕ್ಷ ಬಶೀರ್ ಬೈಕಂಪಾಡಿ, ಶೇಖರ್ ಸುವರ್ಣ, ಶ್ಯಾಮರಾಜ್ ಸುವರ್ಣ, ಚೇತನ್ ಬೆಂಗ್ರೆ, ಕಾರ್ಪೋರೇಟರ್ ಕವಿತಾ ವಾಸು, ಮಾಜಿ ಕಾರ್ಪೋರೇಟರ್ ಕಮಲಾಕ್ಷ ಸಾಲ್ಯಾನ್, ಸರಳಾ ಕರ್ಕೇರ, ಸರಿತಾ, ದಯಾಕರ ಮೆಂಡನ್, ನವೀನ್ ಕರ್ಕೇರ, ಕಮಲಾಕ್ಷ ಅಮಿನ್, ನಾರಾಯಣ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.