ಮಂಗಳೂರು: ನಗರ ಬೆಳೆಯಬೇಕಾದರೆ, ಅಭಿವೃದ್ಧಿಯಾಬೇಕಾದರೆ ಜನರೂ ಕೂಡಾ ಸಹಕರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ರಥಬೀದಿಯಲ್ಲಿ ಫ್ಲಾಟ್ ಮೀಟಿಂಗ್ ನಲ್ಲಿ ಮಾತನಾಡುತ್ತಿದ್ದರು. ಮಂಗಳೂರು ನಗರವನ್ನು ಆಧುನೀಕರಿಸಿ ಸುಸಜ್ಜಿತವಾದ ನಗರವನ್ನಾಗಿ ಬೆಳೆಸಲು ಜನರ ಸಹಭಾಗಿತ್ವ ಅನಿವಾರ್ಯ ಎಂದ ಅವರು ಸ್ವಚ್ಚತೆಯನ್ನು ಕಾಪಾಡಲು ಜನರು ಕೈಜೋಡಿಸಬೇಕು ಎಂದರು.
ಮಂಗಳೂರು ನಗರಕ್ಕೆ ಜನರು ಯಾರ ಒತ್ತಾಯವಿಲ್ಲದೆ ನೆಲೆಸಲು ಬರುವಂತಾಗಬೇಕು. ಇಲ್ಲಿ ಕುಡಿಯುವ ನೀರು, ಮೂಲಭೂತ ಸೌಕರ್ಯವೂ ಸಿಗಬೇಕು. ಕೈಗಾರಿಕೆಗಳು ಬರಬೇಕು, ನಿರುದ್ಯೋಗವನ್ನು ಹೋಗಲಾಡಿಸಿ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದರೆ ಅಭಿವೃದ್ಧಿಯಾಗುತ್ತದೆ ಎಂದರು.
ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಮಾಡಲು ಜನರು ಕೂಡಾ ಮಾನಸಿಕವಾಗಿ ಸಿದ್ಧವಾಗಬೇಕು. ಈ ನಗರ ತಮಗೆ ಯೋಗ್ಯವಾಗಿದೆ ಎನ್ನುವ ಅನುಭವ ಬರಬೇಕು ಎಂದ ಲೋಬೊ ಅವರು ಪ್ರಸ್ತುತ ನಗರದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಿದೆ. ಇದನ್ನು ಕಾಪಾಡಿಕೊಳ್ಳಬೇಕು ಎಂದರು.
ಮಂಗಳೂರಲ್ಲಿ ಕುಡಿಯುವ ನೀರಿಗೆ ಬರ ಇಲ್ಲ. ಈ ವರ್ಷ ಮುಂಚಿತವಾಗಿ ಪರಿಹಾರ ಕಾರ್ಯ ಕೈಗೊಂಡ ಕಾರಣ ನೀರಿಗೆ ಬರ ಇರಲಿಲ್ಲ. ಇನ್ನು ಮಳೆಬರದಿದ್ದರೂ ನಮ್ಮಲ್ಲಿರುವ ನೀರು ಮುಂದಿನ ಒಂದು ತಿಂಗಳಿಗೆ ಸಾಕಾಗುತ್ತದೆ ಎಂದರು. ನಗರ ಪಾಲಿಕೆಯೊಂದಿಗೆ ನಗರದ ನಾಗರಿಕರಾದ ನಾವೂ ಕೂಡಾ ಸಹಕರಿಸಿದರೆ ಬರಬಹುದಾದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸ್ವಚ್ಚಂದವಾಗಿ ಬದುಕಲು ಸಾಧ್ಯವೆಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ರಥಬೀದಿಯಲ್ಲಿ ವಾಹನಗಳು ಸಂಚರಿಸುವಾಗ ಎಚ್ಚರಿಕೆ ವಹಿಸಬೇಕು. ಶಾಲೆ, ಕಾಲೇಜುಗಳು ಇರುವುದರಿಂದ ಅಪಾಯ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.