ಮಂಗಳೂರು: ಮುಂದಿನ ವರ್ಷಗಳಲ್ಲಿ ಮಂಗಳೂರಲ್ಲಿ ಸುಮಾರು 2000 ಕೋಟಿ ರೂಪಾಯಿಯಷ್ಟು ಯೋಜನೆಗಳು ಅನುಷ್ಠಾನವಾಗಲಿವೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಕೆಥೋಲಿಕ ಸಭಾ ಮಂಗಳೂರು ಪ್ರದೇಶದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಯೋಜನೆಗಳು ಅನುಷ್ಠಾನಗೊಳ್ಳಲು ಕನಿಷ್ಠ 5 ವರ್ಷಗಳು ಬೇಕಾಗಲಿದೆ ಎಂದು ನುಡಿದರು.
ಈ ಯೋಜನೆಗಳಲ್ಲಿ ಒಳಚರಂಡಿ, ಕುಡಿಯುವ ನೀರು, ಪಾದಚಾರಿಗಳಿಗೆ ಅನುಕೂಲ, ಬಸ್ ನಿಲ್ದಾಣ ಮುಂತಾದವು ನಿರ್ಮಾಣವಾಗಲಿದೆ ಎಂದ ಅವರು ಈ ಯೋಜನೆಗಳು ಬರುವುದಕ್ಕೆ ಜನರೂ ಸಹಕಾರ ನೀಡಬೇಕು ಎಂದರು. ಶಕ್ತಿ ನಗರದಲ್ಲಿ 1100 ಮನೆಗಳನ್ನು ನಿರ್ಮಿಸಲು ಮೂರು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದ್ದು ಅದು ಈಗ ಪೂರ್ಣಗೊಂಡು ನಿರ್ಮಾಣ ಹಂತಕ್ಕೆ ಬಂದಿದೆ. ಹಾಗೆಯೇ ವಿಳಂಭವಾಗುವುದು ಸಹಜ, ಅದಕ್ಕೆ ಜನರು ಕೂಡಾ ಸಹಕರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ನುಡಿದರು.
ಈ ಸಭೆಯಲ್ಲಿ ಜನರು ತಮ್ಮ ಅಹವಾಲುಗಳನ್ನು ಮಂಡಿಸಿ ಪರಿಹಾರವನ್ನು ಬಯಸಿದರು. ಸಭೆಯಲ್ಲಿ ಮುಖ್ಯಸಚೇತಕ ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್ ಕಾಪಿಕಾಡ್, ಮಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರವೂಫ್, ಕಾರ್ಪೊರೇಟರ್ ಎ.ಸಿ.ವಿನಯ ರಾಜ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಹಾಗೂ ಸರ್ಕಾರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.