ಮಂಗಳೂರು: ಮಂಗಳೂರು ಹಳೆಬಂದರಿನಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಹಮಾಲಿ ಕಾರ್ಮಿಕರಿದ್ದು ಇವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.
ಅವರು ಹಮಾಲಿ ಕಾರ್ಮಿಕರು, ಎಪಿಎಂಸಿ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ತಕ್ಷಣ ಹಮಾಲಿ ಕಾರ್ಮಿಕರಿಗೆ ಲೈಸೆನ್ಸ್ ಪರವಾನಿಗೆ ಕೊಡಬೇಕು ಮತ್ತು ಈಗಾಗಲೆ ಲೈಸೆನ್ಸ್ ಹೊಂದಿರುವವರಿಗೆ ಲೈಸೆನ್ಸ್ ನವೀಕರಿಸಬೇಕು. ಅವರು ಕರ್ತವ್ಯ ವಹಿಸಲು ಅಗತ್ಯವಾದ ಸೇವಾ ಸೌಲಭ್ಯವನ್ನು ಒದಗಿಸುವಂತೆ ಹೇಳಿದರು.
ಹಮಾಲಿ ಕಾರ್ಮಿಕರು ಸೇವೆ ಮಾಡುವ ಸ್ಥಳದಲ್ಲಿಯೇ ರೆಸ್ಟ್ ರೂಮು, ನೀರಿನ ವ್ಯವಸ್ಥೆ, ಟಾಯಿಲೆಟ್ ಸಹಿತ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಎಪಿಎಂಸಿ ಅಧಿಕಾರಿಗಳು ನೀಡುವಂತೆ ಶಾಸಕ ಜೆ.ಆರ್.ಲೋಬೊ ಹೇಳಿದರು. ಟ್ರೇಡ್ ಲೈಸೆನ್ಸ್ ನ್ನು ಬ್ಯಾಂಕ್ ಮೂಲಕವೇ ಪಾವತಿಸುವಂತೆಯು ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು ಯಾವುದೇ ಕಾರಣಕ್ಕೂ ಹಮಾಲಿ ಕಾರ್ಮಿಕರನ್ನು ಕಡೆಗಣಿಸದಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಸದಸ್ಯರಾದ ಭರತೇಶ್ ಅಮೀನ್, ಪ್ರತಿಭಾ, ಶ್ರಮಿಕ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.